ಬೆಂಗಳೂರು, ನ.05 (DaijiworldNews/PY): ಜನರು ಬಿಜೆಪಿಗೆ ತಕ್ಕ ಉತ್ತರ ಕೊಡುವ ದಿನಗಳು ಹತ್ತಿರ ಬರ್ತಿವೆ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ಗೆ ತಿರುಗೇಟು ನೀಡಿರುವ ಬಿಜೆಪಿ, "ಗೆಲುವಿನ ಯಶಸ್ಸಿಗೆ ಯಾರು ಪಿತಾಮಹ ಎಂಬ ಹೆಗ್ಗಳಿಕೆ ಪಡೆಯುವುದಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕಲಹ ಆರಂಭಗೊಂಡಿದೆ" ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಉಪಚುನಾವಣೆ ಫಲಿತಾಂಶದಿಂದ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದೆ ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವ್ಯಾಖ್ಯಾನ. ಡಿಕೆಶಿ ಅವರೇ ಫಲಿತಾಂಶ ಪ್ರಭಾವ ಬೀರಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಗೆಲುವಿನ ಯಶಸ್ಸಿಗೆ ಯಾರು ಪಿತಾಮಹ ಎಂಬ ಹೆಗ್ಗಳಿಕೆ ಪಡೆಯುವುದಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕಲಹ ಆರಂಭಗೊಂಡಿದೆ" ಎಂದು ಟೀಕಿಸಿದೆ.
"ತೆರಿಗೆ ಹೆಸರಿನಲ್ಲಿ ಲೂಟಿ ಎಂದು ಆರೋಪಿಸುತ್ತಿರುವ ಡಿಕೆಶಿ ಅವರೇ, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ದೇಶದಲ್ಲಿ ಮಾಡಿದ್ದು ಲೂಟಿಯೇ? ತೆರಿಗೆ ಸಂಗ್ರಹಣೆ ಆಡಳಿತಾತ್ಮಕ ವಿಚಾರ ಎಂಬ ಸಣ್ಣ ಸಂಗತಿ ನಿಮಗೆ ಅರ್ಥವಾಗಿಲ್ಲವೇ? ಲೂಟಿ ನಡೆಯುವುದು ವೈಯಕ್ತಿಕ ನೆಲೆಯಲ್ಲಿ. ಆಗ ಐಟಿ ದಾಳಿ ನಡೆಯುತ್ತದೆ. ತಿಹಾರ್ ಜೈಲು ಯಾತ್ರೆಯೂ ನಡೆಯುತ್ತದೆ" ಎಂದಿದ್ದಾರೆ.
"ಹಾನಗಲ್ ಉಪ ಚುನಾವಣೆ ಫಲಿತಾಂಶದ ಫಲವಾಗಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇನ್ನೂ ಬೆಲೆ ಇಳಿಕೆಯಾಗಬೇಕಾದ ಪದಾರ್ಥಗಳು ಬಹಳಷ್ಟಿವೆ. ಗ್ಯಾಸ್, ಅಡುಗೆ ಎಣ್ಣೆ, ದಿನಸಿ ಇತ್ಯಾದಿ. ಜನರು ಬಿಜೆಪಿಗೆ ತಕ್ಕ ಉತ್ತರ ಕೊಡುವ ದಿನಗಳು ಹತ್ತಿರ ಬರ್ತಿವೆ" ಎಂದು ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದರು.