ಚಂಡೀಗಡ, ನ.05 (DaijiworldNews/PY): ಭಾರತ-ಪಾಕಿಸ್ತಾನದ ಗಡಿಯ ಸಮೀಪ ಹೊಲವೊಂದರಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕ ತುಂಬಿದ್ದ ಟಿಫಿನ್ ಬಾಕ್ಸ್ ಅನ್ನು ವಶಪಡಿಸಿಕೊಂಡಿದ್ದು, ಭಯೋತ್ಪಾದಕ ದಾಳಿಯ ಸಂಭವನೀಯ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ಫಿರೋಜ್ಪುರದ ಜುಗ್ಗೆ ನಿಹಂಗಾ ವಾಲೆ ಗ್ರಾಮದ ನಿವಾಸಿ ಜಸ್ವಂತ್ ಸಿಂಗ್ ಅಲಿಯಾಸ್ ಶಿಂದಾ ಬಾಬಾ ಹಾಗೂ ಲುಧಿಯಾನದ ವಾಲಿಪುರ್ ಖುರ್ದ್ ಗ್ರಾಮದ ಬಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ರಂಜಿತ್ ಸಿಂಗ್ ಅಲಿಯಾಸ್ ಗೋರಾ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಡಿಜಿಪಿ ಇಕ್ಬಾಲ್ ಪ್ರೀತಿ ಸಿಂಗ್ ಸಾಹೋಟಾ ಮಾಹಿತಿ ನೀಡಿದ್ದಾರೆ.
ಈ ವಾರದ ಆರಂಭದಲ್ಲಿ ಜಲಾಲಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆಯ ವೇಳೆ ಗಡಿ ಪ್ರದೇಶದ ಅಲಿ ಕೆ ಗ್ರಾಮದಲ್ಲಿ ಟಿಫಿನ್ ಬಾಕ್ಸ್ವೊಂದರಲ್ಲಿ ಬಾಂಬ್ ಇರುವುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.