ಬೆಂಗಳೂರು, ನ. 4 (DaijiworldNews/HR): ನವಂಬರ್ 8 ರಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ತಮ್ಮ ದೈನಂದಿನ ವೇಳಾಪಟ್ಟಿಯಂತೆ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು, ಇಲಾಖೆಯ ಕೋವಿಡ್ ತಾಂತ್ರಿಕ ಸಹಾ ಸಮಿತಿಯ ಸದಸ್ಯರು, ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮೊದಲಿಗೆ 9 ರಿಂದ 10ನೇ ತರಗತಿ ಆರಂಭಿಸಿ ಬಳಿಕ 6 ರಿಂದ 8ನೇ ತರಗತಿ ಪ್ರಾರಂಭಿಸಲಾಗಿತ್ತು. ನಂತರ 6 ರಿಂದ 10ನೇ ತರಗತಿಗಳನ್ನು ದೈನಂದಿನ ಪೂರ್ಣ ಅವಧಿಗೆ ಪ್ರಾರಂಭಿಸಲಾಗಿತ್ತು. 1 ರಿಂದ 5ನೇ ತರಗಳನ್ನು ಅರ್ಧ ದಿನ ಭೌತಿಕವಾಗಿ ಪ್ರಾರಂಭಿಸಿ ಇದೀಗ ಪೂರ್ಣ ಅವಧಿಗೆ ಭೌತಿಕವಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಾರಂಭಿಸಲಾಗಿತ್ತು.
ಇನನು ಅಂಗವಾಡಿ ಕೇಂದ್ರಗಳನ್ನು ನ.8ರಿಂದ ಭೌತಿಕವಾಗಿ ಪ್ರಾರಂಭಿಸಲು ಆದೇಶಿಸಿರುವ ಹಿನ್ನಲೆಯಲ್ಲಿ, ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿನ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿನ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಸರಕಾರ ಅನುಮತಿ ನೀಡಿದೆ.