ನವದೆಹಲಿ, ನ 04 (DaijiworldNews/MS): ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು( WHO) ಬುಧವಾರ ಅನುಮೋದನೆ ನೀಡಿದೆ. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಅನ್ವಯ ಜಾಗತಿಕ ಸಂಸ್ಥೆಯು ಈ ನಿರ್ಧಾರ ತೆಗೆದುಕೊಂಡಿದೆ.
ನವೆಂಬರ್ 3ರ ಬುಧವಾರ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಿತು. ಈ ಸಭೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸುವ ಪಟ್ಟಿಗೆ ಸೇರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಕಳುಹಿಸಲಾಯಿತು. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ಕೊವ್ಯಾಕ್ಸಿನ್ ಲಸಿಕೆಗೆ WHO ಅನುಮೋದನೆ ನೀಡಿದೆ.
ತಾಂತ್ರಿಕ ಸಲಹಾ ತಂಡವು 18 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ತುರ್ತು ಬಳಕೆಯ ಪಟ್ಟಿಗಾಗಿ ಭಾರತ ನಿರ್ಮಿತ ಲಸಿಕೆಯನ್ನು ಶಿಫಾರಸು ಮಾಡಿದೆ. ಭಾರತದಲ್ಲಿ ಉತ್ಪಾದಿಸುವ ಎರಡು ಕೊರೊನಾವೈರಸ್ ಲಸಿಕೆಗಳ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ. ಕೋವಿಡ್-19 ವಿರುದ್ಧ ವ್ಯಾಕ್ಸಿನೇಷನ್ನಲ್ಲಿ ಭಾರತದ ಪ್ರಯಾಣಕ್ಕೆ ಇದು ಪ್ರಮುಖ ವಿಜಯವಾಗಿದೆ.