ಬೆಂಗಳೂರು, ನ.04 (DaijiworldNews/PY): "ಜೆಡಿಎಸ್ ಪಕ್ಷ ಉಳಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸಿ, ಪ್ರತಿ ಜಿಲ್ಲೆಯ ಕಾರ್ಯಕರ್ತರ ನೆರವಿನೊಂದಿಗೆ ರಾಜ್ಯಾದಾದ್ಯಂತ ಪಕ್ಷ ಕಟ್ಟುವ ಕಾರ್ಯವನ್ನು ಮಾಡುತ್ತೇವೆ" ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾವು ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆವು. ಅಲ್ಲಿ 38 ಸಾವಿರ ಮತದಾರರಿದ್ದಾರೆ. ಯಾರಿಗೆ ಆ ಮತಗಳು ಹೋಗಿದೆ?. ಒಂದು ವೇಳೆ ಬಿಜೆಪಿಗೆ ಮತ ಹಾಕಿದರೆ?. ನಮಗೆ ಮತ ಹಾಕಿಲ್ಲ ಎಂದಾದರೆ ಕಾಂಗ್ರೆಸ್ಗೆ ಹಾಕುತ್ತಾರೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೋಲಿಸಲು ಹೀಗೆ ಮಾಡಿದರು ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಈ ಕುರಿತು ಮಾತನಾಡುವುದಿಲ್ಲ. ಯಾವುದೇ ಉಪಚುನಾವಣೆಯ ಪ್ರಚಾರಕ್ಕೆ ನಾನು ಹೋಗುವುದಿಲ್ಲ. ಆದರೆ, ಹಾನಗಲ್ ಹಾಗೂ ಸಿಂದಗಿಗೆ ನಾನು ಪ್ರಚಾರಕ್ಕೆ ತೆರಳಿದ್ದೆ. ಆದರೂ ಅಲ್ಲಿ ಪಕ್ಷಕ್ಕೆ ಸೋಲಾಗಿದೆ. ಪಕ್ಷದಲ್ಲಿ ಈ ಕುರಿತು ಚರ್ಚಿಸುತ್ತೇವೆ" ಎಂದಿದ್ದಾರೆ.