ಬೆಳಗಾವಿ, ನ.04 (DaijiworldNews/PY): ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯಪಾಲರಿಗೆ ಪತ್ರ ಬರೆದಿರುವ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು, "ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅವರ ವಿರುದ್ದ ತನಿಖೆ ನಡೆಸಿ, ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಿಂದ ಕೈಬಿಡಬೇಕು" ಎಂದು ಬರೆದಿದ್ದಾರೆ.
ಭೀಮಪ್ಪ ಗಡಾದ ಅವರು ಬರೆದ ಪತ್ರವನ್ನು ರಾಜ್ಯಪಾಲರ ಕಚೇರಿಯಿಂದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ವರ್ಗಾವಣೆ ಮಾಡಿದ್ದಾರೆ.
ಈ ಪತ್ರವು ಆಡಳಿತ ಸುಧಾರಣಾ ಇಲಾಖೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಿಗೆ ವರ್ಗಾವಣೆಯಾಗಿದೆ. ಈ ಪತ್ರಕ್ಕೆ ಅಭಾಧ್ಯಕ್ಷರು ಯಾವ ರೀತಿಯಾದ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.