ಬೆಂಗಳೂರು, ನ. 4 (DaijiworldNews/HR): ನಟ ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಅವರಿಗೆ ಚಿತ್ರದುರ್ಗದ ಮುರುಘಾಮಠ ಕೊಡುವ ಪ್ರತಿಷ್ಠಿತ ಮರಣೋತ್ತರ ಬಸವಶ್ರೀ ಪುರಸ್ಕಾರ ನೀಡಲಾಗುವುದು ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಣೆ ಮಾಡಿದ್ದಾರೆ.
ಬಸವಶ್ರೀ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿದ್ದು, ಬರುವ ಬಸವ ಜಯಂತಿ ದಿನ ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಮುರುಘಾಮಠದ ಅನುಭವ ಮಂಟಪದಲ್ಲಿ ಈ ಸಮಾರಂಭ ನಡೆಯಲಿದ್ದು, ಪುನೀತ್ ಪರವಾಗಿ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ನಟ ಶಿವರಾಜಕುಮಾರ್ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ನವೆಂಬರ್ 10 ರಂದು ಪುನೀತ್ ಮನೆಗೆ ಮುರುಘಾಶ್ರೀ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ‘ಯಾವ ಪ್ರಶಸ್ತಿ ಗೌರವಗಳಿಗಿಂತಲೂ ಪುನೀತ್ ರಾಜಕುಮಾರ್ ಜನತೆಯಿಂದ ಗಳಿಸಿರುವ ಪ್ರೀತಿ-ಅಭಿಮಾನ ದೊಡ್ಡದು. ಹೀಗಿದ್ದರೂ, ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ’ ಎಂದಿದ್ದರು.