ನವದೆಹಲಿ, ನ.04 (DaijiworldNews/PY): "ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು 5 ಹಾಗೂ 10 ರೂ. ಗೆ ಕಡಿಮೆ ಮಾಡುವ ಮುಖೇನ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ದೀಪಾವಳಿಯ ಸಂದರ್ಭ ಜನಸಾಮಾನ್ಯರಿಗೆ ಸಮಾಧಾನ ತಂದಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತಗೊಳಿಸಿರುವುದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಪ್ರಮುಖ ತೀರ್ಮಾನವಾಗಿದೆ. ಸಾಮಾನ್ಯ ಜನರಿಗೆ ಈ ಕ್ರಮ ಸಮಾಧಾನ ತರುವುದರೊಂದಿಗೆ ಹಣದುಬ್ಬರವನ್ನೂ ಕಡಿಮೆ ಮಾಡಲಿದೆ" ಎಂದಿದ್ದಾರೆ.
"ಬಿಜೆಪಿ ಆಡಳಿತವಿರುವ ರಾಜ್ಯಗಳು ಕೂಡಾ ಇಂಧನ ದರಗಳನ್ನು ಮತ್ತಷ್ಟು ಕಡಿತಗೊಳಿಸುವ ಮೂಲಕ ಉತ್ತಮ ಕಾರ್ಯ ಮಾಡಿವೆ" ಎಂದು ತಿಳಿಸಿದ್ದಾರೆ.
"ತೈಲೋತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡುವ ಪ್ರಮುಖ ತೀರ್ಮಾನವನ್ನು ಕೈಗೊಂಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದಿದ್ದಾರೆ.