ಬೆಂಗಳೂರು, ನ.04 (DaijiworldNews/PY): "ರಾಜ್ಯ ಸರ್ಕಾರ ಕಾಟಾಚಾರಕ್ಕೆ ಆನ್ಲೈನ್ ಗೇಮಿಂಗ್ ನಿಷೇಧ ಕಾನೂನು ತಂದಂತಾಗಿದೆ. ಆನ್ಲೈನ್ ಗೇಮ್ಗಳ ವ್ಯಸನಕ್ಕೆ ಬಿದ್ದ ಸಾವಿರಾರು ಯುವಕರು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಗೃಹ ಇಲಾಖೆ ಇನ್ನಾದರೂ ನಿದ್ದೆಯಿಂದ ಏಳಲಿ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಳೆದ ಅಧಿವೇಶನದಲ್ಲಿ ಆನ್ಲೈನ್ ಗೇಮ್ ನಿಷೇಧಿಸಿ ಕಾನೂನು ತರಲಾಗಿದೆ. ಆದರೂ ರಾಜ್ಯದಲ್ಲಿ ಆನ್ಲೈನ್ ಗೇಮ್ಗಳಿಗೆ ಕಡಿವಾಣ ಬಿದ್ದಿಲ್ಲ. ಇದು ನೆಲದ ಕಾನೂನನ್ನೆ ಅಣಕ ಮಾಡಿದಂತೆ" ಎಂದಿದ್ದಾರೆ.
"ಗೃಹ ಸಚಿವ ಆರಗ ಜ್ಞಾನೇಂದ್ರ ಅವರೆ, ಅಂಗೀಕಾರವಾದ ಕಾನೂನನ್ನು ಜಾರಿ ಮಾಡುವ ಜವಾಬ್ಧಾರಿ ನಿಮ್ಮ ಇಲಾಖೆಯದ್ದು, ಕಾನೂನು ಇದ್ದರೂ ಈ ಗೇಮಿಂಗ್ ಆ್ಯಪ್ಗಳ ಮೇಲೆ ಕ್ರಮ ಏಕಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ಡ್ರೀಮ್ 11 ಬಿಟ್ಟರೆ ಇನ್ನೆಲ್ಲಾ ಆನ್ಲೈನ್ ಗೇಮ್ಗಳು ಕಾನೂನಿನ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ಆನ್ಲೈನ್ ಗೇಮಿಂಗ್ ನಿಷೇಧ ಕಾನೂನು ತಂದಂತಾಗಿದೆ. ಆನ್ಲೈನ್ ಗೇಮ್ಗಳ ವ್ಯಸನಕ್ಕೆ ಬಿದ್ದ ಸಾವಿರಾರು ಯುವಕರು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಗೃಹ ಇಲಾಖೆ ಇನ್ನಾದರೂ ನಿದ್ದೆಯಿಂದ ಏಳಲಿ" ಎಂದಿದ್ದಾರೆ.