ಚಂಡಿಗಡ, ನ.04 (DaijiworldNews/PY): ಇಂಧನಗಳ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸುವುದಾಗಿ ಹರಿಯಾಣ ಸರ್ಕಾರ ಗುರುವಾರ ಪ್ರಕಟಿಸಿದ್ದು, "ಪ್ರತಿ ಲೀಟರ್ ಮೇಲೆ 12ರಷ್ಟು ಕಡಿಮೆ ಮಾಡಲಾಗುತ್ತಿದೆ" ಎಂದು ತಿಳಿಸಿದೆ.
ಈ ಬಗ್ಗೆ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಟ್ವೀಟ್ ಮಾಡಿದ್ದು, "ದೀಪಾವಳಿಯ ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರ ಮುಂದುವರಿದ ಭಾಗವಾಗಿ ಹರಿಯಾಣ ಸರ್ಕಾರವೂ ಕೂಡಾ ರಾಜ್ಯದ್ಲಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ" ಎಂದು ಹೇಳಿದ್ದಾರೆ.
"ಮೂಲಕ ಹರಿಯಾಣ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ದರ 12ರಷ್ಟು ಕಡಿಮೆಯಾಗಲಿದೆ" ಎಂದಿದ್ದಾರೆ.
ಬುಧವಾರ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ 5 ಹಾಗೂ 10 ಅಬಕಾರಿ ಸುಂಕ ಕಡಿತಗೊಳಿಸುವುದಾಗಿ ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರ ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ನ ಮೇಲಿನ ವ್ಯಾಟ್ ಕಡಿತಗೊಳಿಸುವುದಾಗಿ ಘೋಷಣೆ ಮಾಡಿತ್ತು. ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಲಾಗಿದೆ.