ಬೆಂಗಳೂರು, ನ.03 (DaijiworldNews/PY): "ಉಪಚುನಾಣೆಯ ಗೆಲುವನ್ನು ಸಂಭ್ರಮಿಸುವುದಕ್ಕೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಾಧ್ಯವಾಗುತ್ತಿಲ್ಲ. ಯಶಸ್ಸಿಗೆ ನಾನೇ ಕಾರಣ ಎಂಬ ಪೈಪೋಟಿಗೆ ಡಿಕೆಶಿ ಸೋತು ಹೋಗಿದ್ದಾರೆ. ಡಿಕೆಶಿ ಕಾಸು, ಸಿದ್ದರಾಮಯ್ಯ ಬಾಸು!" ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, "ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಪ್ರಯಾಸದ ಎರಡನೇ ಗೆಲುವು ಲಭಿಸಿದೆ. ಆದರೆ ಈ ಗೆಲುವನ್ನು ಸಂಭ್ರಮಿಸುವುದಕ್ಕೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಾಧ್ಯವಾಗುತ್ತಿಲ್ಲ. ಯಶಸ್ಸಿಗೆ ನಾನೇ ಕಾರಣ ಎಂಬ ಪೈಪೋಟಿಗೆ ಡಿಕೆಶಿ ಸೋತು ಹೋಗಿದ್ದಾರೆ. ಡಿಕೆಶಿ ಕಾಸು, ಸಿದ್ದರಾಮಯ್ಯ ಬಾಸು!" ಎಂದು ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಅವರ "ನಾಯಕತ್ವದಲ್ಲಿ" ಹಾಗೂ ಶಿವಕುಮಾರ್ ಅವರ "ಮಾರ್ಗದರ್ಶನದಲ್ಲಿ" ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಬೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ. ಡಿಕೆಶಿ ಅವರನ್ನು ಮಾರ್ಗದರ್ಶಿ ಮಂಡಳಿಗೆ ಸೇರಿಸುವುದಕ್ಕೆ ಸಿದ್ದರಾಮಯ್ಯ ಬಣ ಹುನ್ನಾರ ನಡೆಸುತ್ತಿದೆಯೇ? ಎಂದು ಪ್ರಶ್ನಿಸಿದೆ.
"ಡಿಕೆಶಿ ಅವರೇ, ಹಾನಗಲ್ ಫಲಿತಾಂಶದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಸಂಭ್ರಮವಿರಲಿಲ್ಲ. ಏಕೆಂದರೆ ನಿಮ್ಮ ಸಂತಸವನ್ನು ಅದಾಗಲೇ ಸಿದ್ದರಾಮಯ್ಯ ಕಸಿದು ಬಿಟ್ಟಿದ್ದಾರಲ್ಲವೇ? ಕಸರತ್ತು ಮಾಡಿ ಕೆಪಿಸಿಸಿ ಪಟ್ಟ ಒಲಿಸಿಕೊಂಡರೂ ಈಗ ದ್ವಿತೀಯ ಸಾಲಿನ ನಾಯಕನಂತಾಗಿರುವ ಶಿವಕುಮಾರ್ ಅವರ ಬಗ್ಗೆ ಅನುಕಂಪವಿದೆ" ಎಂದಿದೆ.
"ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದು ನುಣುಚಿಕೊಳ್ಳುವ ಡಿಕೆಶಿ ಅವರೇ, ನಿಮಗೊಂದು ಸವಾಲು. ನಿಮ್ಮ ಪದವಿಯ ಮೇಲೆ ನಿಮಗೆ ಹಿಡಿತವಿದ್ದರೆ ಶೀಘ್ರದಲ್ಲೇ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿ, ನೋಡೋಣ. ಪಟ್ಟಿ ಪ್ರಕಟವಾದ ಕ್ಷಣದಿಂದ ಪದಚ್ಯುತಿಯ ಕಾರ್ಯಾಚರಣೆ ಆರಂಭವಾಗಲಿದೆ ಎಂಬ ಭಯ ಕಾಡುತ್ತಿದೆಯೇ?" ಎಂದು ಕೇಳಿದೆ.