ಬೆಂಗಳೂರು, ನ.03 (DaijiworldNews/PY): "ಕಾಂಗ್ರೆಸ್ ಪಕ್ಷ ಮುಳುಗಿದ ಹಡಗು, ಒಡೆದ ಮನೆ, ಮೂರು ಗುಂಪು ಎಂದೆಲ್ಲಾ ಬಣ್ಣಿಸಿದವರಿಗೆ ಹಾನಗಲ್ ಉಪಚುನಾವಣೆ ಸೂಕ್ತ ಉತ್ತರ ನೀಡಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಾಂಗ್ರೆಸ್ ಅನ್ನು ಮುಳುಗಿದ ಹಡಗು ಎಂದವರಿಗೆ ಉಪಚುನಾವಣಾ ಫಲಿತಾಂಶ ಸರಿಯಾದ ಉತ್ತರ ನೀಡಿದೆ" ಎಂದಿದ್ದಾರೆ.
"ಜನರೊಂದಿಗೆ ಸ್ಪಂದಿಸುವವರಿಗೆ ಮತದಾರ ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ ಹಾನಗಲ್ ಫಲಿತಾಂಶವೇ ಸಾಕ್ಷಿ" ಎಂದು ತಿಳಿಸಿದ್ದಾರೆ.
"ಹಾನಗಲ್ ಗೆಲುವು ಮಾತ್ರವಲ್ಲದೇ ಸಿಂದಗಿಯಲ್ಲಿ ನಮ್ಮ ಪಕ್ಷದ 40 ಸಾವಿರ ಮತ ಗಳಿಕೆ ಹೆಚ್ಚಾಗಿದೆ. ಈ ಕಾರಣದಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ" ಎಂದು ಹೇಳಿದ್ದಾರೆ.
"ಹಾನಗಲ್ನಲ್ಲಿ ಸಿಎಂ ಅವರು ಅಳಿಯ ಎಂದು ಇಡೀ ಸರ್ಕಾರ ಕೊಂಡೊಯ್ದು ಒತ್ತಡ ಆಮೀಷ ಒಡ್ಡಿದ್ದರು. ಆದರೆ, ಹಾನಗಲ್ ಮಂದಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ದೇಶಕ್ಕೆ ಸಂದೇಶ ರವಾನಿಸಿದ್ದಾರೆ" ಎಂದು ತಿಳಿಸಿದ್ದಾರೆ.