ನವದೆಹಲಿ, ನ.03 (DaijiworldNews/PY): "ಮನೆ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡುವ ಅಭಿಯಾನದ ಅವಶ್ಯಕತೆ ಇದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ಲಸಿಕೆ ನೀಡಿಕೆಯಲ್ಲಿ ಹಿಂದಿರುವ 40ಕ್ಕೂ ಅಧಿಕ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಈವರೆಗೆ ಲಸಿಕಾ ಕೇಂದ್ರದ ಬಳಿ ನೀವು ಜನರನ್ನು ಕರೆತರುತ್ತಿದ್ದಿರಿ. ಈಗ ನೀವೇ ಪ್ರತಿ ಮನೆಗೂ ತೆರಳಿ ಲಸಿಕೆ ನೀಡುವ ಮೂಲಕ ಹರ್ ಘರ್ ದಸ್ತಕ್ ಆಂದೋಲನದೊಂದಿಗೆ ಕೈಜೋಡಿಸಬೇಕು" ಎಂದಿದ್ದಾರೆ.
ಇತ್ತೀಚೆಗೆ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, "ಧಾರ್ಮಿಕ ನಾಯಕರ ಮೂಲಕ ಲಸಿಕೆಯ ಅವಶ್ಯಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು" ಎಂದು ತಿಳಿಸಿದ್ದಾರೆ.
"ಲಸಿಕೆಯ ಬಗ್ಗೆ ಸ್ಥಳೀಯ ಧಾರ್ಮಿಕ ನಾಯಕರ ನೆರವು ಪಡೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡಬೇಕು. ಅಲ್ಲದೇ, ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹೊಸ ವಿಧಾನಗಳನ್ನು ಅನುಸರಿಸಬೇಕು" ಎಂದು ಹೇಳಿದ್ದಾರೆ.
"ಮಹಾರಾಷ್ಟ್ರ, ನಾಗಾಲ್ಯಾಂಡ್, ಮೇಘಾಲಯ, ಜಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ ಸೇರಿದಂತೆ 40 ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇದೆ" ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.
ಸಭೆಯಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೊದಲ ಡೋಸ್ ಪಡೆದಿರುವ ಹಾಗೂ ಕಡಮೆ ಪ್ರಮಾಣದಲ್ಲಿ ಎರಡನೇ ಡೋಸ್ ಪಡೆದಿರುವ ಜಿಲ್ಲೆಗಳ ಅಧಿಕಾರಿಗಳು ಭಾಗವಹಿಸಿದ್ದರು.