ಬೆಂಗಳೂರು, ನ.03 (DaijiworldNews/PY): "ಹೊಟ್ಟೆ ಪಾಡಿಗಾಗಿ ದಲಿತರು ಬಿಜೆಪಿಗೆ ಹೋಗಿದ್ದಾರೆ ಎಂದು ನಾನು ಹೇಳಿಲ್ಲ. ಬಿಜೆಪಿಯವರು ಈಗ ಬಣ್ಣ ಕಟ್ಟಿ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೇಗೂ ನಾನು ಆರ್ಎಸ್ಎಸ್ ವಿರುದ್ದ ಇದ್ದೇನಲ್ಲ ಅದಕ್ಕಾಗಿ ಬಿಜೆಪಿಯವರೇ ಹೇಳಿ ಈ ರೀತಿ ಮಾಡಿಸಿದ್ದಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ಮಾಡುತ್ತಾರೆ. ನಾನು ದಲಿತ ಸಮಾವೇಶದಲ್ಲಿ ಮಾತನಾಡಿದ್ದೆ. ದಲಿತರು ಎನ್ನುವ ಶಬ್ದವನ್ನೇ ಬಳಸಿಲ್ಲ" ಎಂದಿದ್ದಾರೆ.
"ನನ್ನ ಪ್ರಕಾರ ಇವರೆಲ್ಲರೂ ಸಂವಿಧಾನದ ವಿರುದ್ದ ಇರುವವರು. ನಾವೆಲ್ಲರೂ ಅಂಬೇಡ್ಕರ್ ಪರವಾಗಿ ಇರುವವರು. ನಾನು ದಲಿತ ಸಮಾವೇಶದಲ್ಲಿ ಈ ರೀತಿಯಾಗಿ ಮಾತನಾಡಿದ್ದರೆ ಅಲ್ಲೇ ದಲಿತರು ವಿರೋಧಿಸುತ್ತಿದ್ದರು. ಈಗ ಬಿಜೆಪಿಯವರು ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ದಲಿತರ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡವನು ನಾನು. ಅಂಬೇಡ್ಕರ್ ಹೇಳಿದ ಹಾಗೇ ಕೇವಲ ಮತ ಹಾಕುವುದಷ್ಟೇ ಅಲ್ಲ, ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಾತಂತ್ರ್ಯ ಇರಬೇಕು. ಮುಖ್ಯ ವಾಹಿನಿಗೆ ಬರಬೇಕು ಎನ್ನುವಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ನಾವು ಬಿಜೆಪಿಯವರಿಂದ ಪಾಠ ಕಲಿಯಬೇಕೆ?" ಎಂದು ಪ್ರಶ್ನಿಸಿದ್ದಾರೆ.
"ಬಿಟ್ ಕಾಯಿನ್ ಹಗರಣ ಡೈವರ್ಟ್ ಮಾಡಲು ಸಿದ್ದರಾಮಯ್ಯ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ವಿಚಾರ ಜನರಿಗೆ ತಿಳಿದಿದೆ. ಹಾಗಾಗಿ ಜನರು ಅರ್ಥ ಮಾಡಿಕೊಂಡಿದ್ದಾರೆ" ಎಂದಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಮ್ಮ ಗುರಿ ಮಿಷನ್ 123 ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, "ಈ ರೀತಿಯಾದ ಮಿಷನ್ಗಳನ್ನು ಬೇಕಾದಷ್ಟು ನೋಡಿದ್ದೇನೆ. ಈ ರೀತಿಯಾದ ಮಿಷನ್ಗಳು ಸಾಕಷ್ಟು ಬಂದು ಹೋಗಿವೆ. ಹಾಗಾಗಿ ನಾವೇನೂ ಹೇಳುವುದಿಲ್ಲ. ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ" ಎಂದು ಹೇಳಿದ್ದಾರೆ.