ಲಕ್ನೋ, ನ 04 (DaijiworldNews/MS): ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಾಗ್ಪತ್ ಜಿಲ್ಲೆಯಲ್ಲಿ ಸಾಲಬಾಧೆಯಿಂದ ಬಳಲುತ್ತಿರುವ ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ರೈತನ ಆತ್ಮಹತ್ಯೆಯೂ "ಹೃದಯ ವಿದ್ರಾವಕ" ಎಂದು ಬೇಸರ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಯಾದವ್ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿರುವ ರಾಜ್ಯದಲ್ಲಿ ರೈತರ ಸ್ಥಿತಿಯು ಸರ್ಕಾರದ "ಎಲ್ಲಾ ಸುಳ್ಳನ್ನು ಬಹಿರಂಗಪಡಿಸುತ್ತಿದೆ" ಎಂದು ಹೇಳಿದ್ದಾರೆ.
" ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೃದಯ ವಿದ್ರಾವಕವಾಗಿದೆ! ಬಿಜೆಪಿ ಆಡಳಿತದಲ್ಲಿ ರೈತರ ಇಂತಹ ಸ್ಥಿತಿಗಳು ಸರ್ಕಾರದ ಎಲ್ಲ ಸುಳ್ಳುಗಳನ್ನು ಬಯಲು ಮಾಡುತ್ತಿವೆ. ಅಷ್ಟಕ್ಕೂ ರಾಜ್ಯದ ರೈತರು ಇದನ್ನೆಲ್ಲ ಎಲ್ಲಿವರೆಗೆ ಯಾವಾಗ ಸಹಿಸಿಕೊಳ್ಳುತ್ತಾರೆ? #Nahi_Chahiye_BJP (ಬಿಜೆಪಿಯ ಆಡಳಿತ ಬೇಡ) ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು.
ಬಿಹಾರಿಪುರ ಗ್ರಾಮದಲ್ಲಿ ಮಂಗಳವಾರ ಚೌಧರಿ ಅನಿಲ್ ಕುಮಾರ್(45) ಎಂಬುವವರು ಸಾಲಬಾಧೆ ತಾಳಲಾರದೇ ಮಂಗಳವಾರ ಹೊಲವೊಂದರಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ರೈತ ಖಿನ್ನತೆಗೆ ಒಳಗಾಗಿದ್ದಾನೆ ಎಂದು ರೈತ ಸಂಬಂಧಿಕರನ್ನು ಉಲ್ಲೇಖಿಸಿ ವರದಿಯಲ್ಲಿ ತಿಳಿಸಲಾಗಿದೆ. ಸ್ಥಳೀಯ ಲೇವಾದೇವಿಗಾರರಿಂದ ಸುಮಾರು ₹ 7 ಲಕ್ಷ ಹಾಗೂ ₹ 3 ಲಕ್ಷ ಬ್ಯಾಂಕ್ ಸಾಲ ಪಡೆದಿದ್ದ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.