ಚಿತ್ರದುರ್ಗ, ನ.03 (DaijiworldNews/PY): ದ್ವಿತೀಯ ಪಿಯು ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ವಿದ್ಯಾರ್ಥಿಯನ್ನು ಇಲ್ಲಿನ ಎಸ್ಎಲ್ವಿ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ನಾಡಿಗ್ ಓಂಪ್ರಕಾಶ್ (17) ಎಂದು ಗುರುತಿಸಲಾಗಿದೆ.
"ಈತ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದವನಾಗಿದ್ದು, ಚಿತ್ರದುರ್ಗದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರತಿದಿನದಂತೆ ಬೆಳಗ್ಗೆ 8.30ಕ್ಕೆ ಓಂಪ್ರಕಾಶ್ ಕಾಲೇಜಿಗೆ ಬಂದಿದ್ದ. ಕೊಠಡಿಗೆ ತೆರಳು ವೇಳೆ ಈತ ದಿಢೀರ್ ಕುಸಿದು ಬಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.
ಓಂಪ್ರಕಾಶ್ ಕುಸಿದು ಬಿದ್ದಿದ್ದನ್ನ ಸಹಪಾಠಿಗಳು ಹಾಗೂ ಶಿಕ್ಷಕರು ಗಮನಿಸಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿ ಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಯ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.