ಬೆಂಗಳೂರು, ನ.03 (DaijiworldNews/PY): "ಸಿದ್ದರಾಮಯ್ಯ ಅವರ ಬಣ ನೀಡುತ್ತಿರುವ ಒಳ ಏಟಿನಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತತ್ತರಿಸಿ ಹೋಗಿದ್ದಾರೆ" ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, "ಸಿದ್ದರಾಮಯ್ಯ ಅವರ ಬಣ ನೀಡುತ್ತಿರುವ ಒಳ ಏಟಿನಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತತ್ತರಿಸಿ ಹೋಗಿದ್ದಾರೆ. ಉಪಚುನಾವಣೆ ಫಲಿತಾಂಶದ ದಿನವೇ ಡಿಕೆಶಿ ಅವರು ವಿಷಾದದ ಮಾತುಗಳನ್ನಾಡಿದ್ದಾರೆ. ಗೆಲುವನ್ನು ಸಂಭ್ರಮಿಸುವುದಕ್ಕೂ ಕೆಪಿಸಿಸಿ ಅಧ್ಯಕ್ಷರಿಗೆ ಅವರಿಗೆ ಸಾಧ್ಯವಾಗುತ್ತಿಲ್ಲವೇ?" ಎಂದು ಪ್ರಶ್ನಿಸಿದೆ.
"ಒಂದು ಹುದ್ದೆಗೆ ಮೂರ್ನಾಲ್ಕು ಆಕಾಂಕ್ಷಿಗಳು, ಚೇರ್ ಕಾಲಿ ಮಾಡಿಸಲು ಪ್ರಯತ್ನ ಮಾಡುತ್ತಾರೆ, ಮ್ಯೂಸಿಕಲ್ ಚೇರ್ನಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಡಿಕೆಶಿ ಅವರು ವಿಷಾದ ವ್ಯಕ್ತಪಡಿಸುತ್ತಿರುವುದೇಕೆ? ಹಾನಗಲ್ ಫಲಿತಾಂಶದ ಕ್ರೆಡಿಟ್ಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ತೀವ್ರಗೊಂಡಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಾನು ಸಿಎಂ ಆಕಾಂಕ್ಷಿ ಎಂದು ಮತ್ತೆ ವಾದ ಮಂಡಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಡಿಕೆಶಿ ಅವರನ್ನು ಬಗ್ಗುಬಡಿಯುವ ಪ್ರಯತ್ನ ನಡೆಯುತ್ತಿದೆ. ಮತ್ತೆ ಮತ್ತೆ ಹೇಳುತ್ತಿದ್ದೇವೆ, ಡಿಕೆಶಿ ಕಾಸು, ಸಿದ್ದರಾಮಯ್ಯ ಬಾಸು" ಎಂದು ವ್ಯಂಗ್ಯವಾಡಿದೆ.
"ಹಾನಗಲ್ ಗೆಲುವು, ಸಿಂಧಗಿ ಸೋಲು ಸೇರಿದಂತೆ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗಿಂತ ಮೊದಲು ಹೈಕಮಾಂಡ್ ತಲುಪುವ ಧಾವಂತ. ಒಂದು ಫಲಿತಾಂಶ, ಹಲವು ಬಣ!" ಎಂದಿದೆ.
ನಕಲಿ ಗಾಂಧಿ ಕುಟುಂಬದ ಭದ್ರಕೋಟೆ, ತವರು ಕ್ಷೇತ್ರ ಅಮೇಥಿಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರು ಸೋತಿದ್ದರು. ಮುಖ್ಯಮಂತ್ರಿಯಾಗಿದ್ದುಕೊಂಡೇ ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ. ಒಂದು ಕ್ಷೇತ್ರವನ್ನು ಗೆದ್ದು "ಈ ಫಲಿತಾಂಶ ದೇಶಕ್ಕೆ ಸಂದೇಶ" ಎನ್ನುವುದು ಮೂರ್ಖತನ ಎಂದು ಹೇಳಿದೆ.
"ಉಪಚುನಾವಣೆ ಮುಂದಿನ ರಾಜಕೀಯದ ದಿಕ್ಸೂಚಿಯೇ ಎಂದು ಚುನಾವಣೆಗೆ ಮುನ್ನ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸದೇ ಜಾರಿಕೊಂಡ ಡಿಕೆಶಿ ಅವರು ಈಗ ಇದು ರಾಷ್ಟ್ರ ರಾಜಕಾರಣದ ಬದಲಾವಣೆ ಸಂಕೇತ ಎನ್ನುತ್ತಿದ್ದಾರೆ. ಗಾಳಿ ಬಂದತ್ತ ತೂರಿಕೊಳ್ಳುವುದು ನಾಯಕನ ಲಕ್ಷಣವಲ್ಲ" ಎಂದು ತಿಳಿಸಿದೆ.
"ಸಿದ್ದರಾಮಯ್ಯ ಅವರೇ, ಕಳೆದ ಎರಡು ವರ್ಷದ ಅವಧಿಯಲ್ಲಿ ಎದುರಾದ ಉಪಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಗಮನಿಸಿದ್ದೀರಾ? ನಿಮಗೆ ಮರೆವಿನ ಸಮಸ್ಯೆ ಇಲ್ಲ ಎಂದಾದರೆ ನಾವು ಅಂಕಿ-ಸಂಖ್ಯೆ ನೀಡುವುದಿಲ್ಲ. ಇಲ್ಲವಾದರೆ ಅಂಕಿಸಂಖ್ಯೆಗಳ ಸಮೇತ ನಿಮ್ಮ ಅವಕಾಶವಾದಿತನದ ಹೇಳಿಕೆ ಬಿಚ್ಚಿಡಬೇಕಾಗುತ್ತದೆ" ಎಂದಿದೆ.