ಬೆಂಗಳೂರು, ನ.03 (DaijiworldNews/PY): "ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೆಸರನ್ನು ಬಹಿರಂಗಪಡಿಸಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷ ನಾಯ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, "ರಾಜ್ಯದ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸಿದ್ದು ಸರ್ಕಾರವೇ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ವಹಿಸಿದೆ ಎಂದು ಹೇಳಿದ್ದಾರೆ. ಸಮಗ್ರ ತನಿಖೆ ನಡೆಸಿದ್ದರೆ ಹೆಚ್ಚಿನ ತನಿಖೆಗೆ ಇಡಿ ಮತ್ತು ಸಿಬಿಐಗೆ ಒಪ್ಪಿಸುವ ಅನಿವಾರ್ಯತೆ ಯಾಕೆ ಬಂತು?" ಎಂದು ಕೇಳಿದ್ದಾರೆ.
"ಬಿಜೆಪಿ ಅಥವಾ ಕಾಂಗ್ರೆಸ್ ಆಗಲಿ, ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಯಾವುದೇ ರಾಜಕೀಯ ನಾಯಕರಾದರೂ ಅವರ ಹೆಸರನ್ನು ಬಹಿರಂಗಪಡಿಸಿ" ಎಂದು ಆಗ್ರಹಿಸಿದ್ದಾರೆ.
"ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಗಮನಿಸಿದರೆ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದವರ ವಿರುದ್ದ ಆರೋಪ ಮಾಡಲು ಹೋಗದೆ ತನಿಖೆಯ ಪೂರ್ಣ ವಿವರವನ್ನು ಸಾರ್ವಜನಿಕರ ಮುಂದಿಡಬೇಕು" ಎಂದು ಒತ್ತಾಯಿಸಿದ್ದಾರೆ.
"ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೊಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಕದ್ದ ಆ ಬಿಟ್ ಕಾಯಿನ್ ಎಲ್ಲಿದೆ? ಅದನ್ನು ಜಪ್ತಿ ಮಾಡಲಾಗಿದೆಯೇ? ಇಲ್ಲವೇ ಅವು ಇನ್ನೂ ಪತ್ತೆಯಾಗಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.