ಬೆಂಗಳೂರು, ನ. 02 (DaijiworldNews/HR): ಸಿಂದಗಿಯಲ್ಲಿ ದೊಡ್ಡ ಅಂತರದಲ್ಲಿ ನಾವು ಸೋತಿದ್ದು, ಸೋಲನ್ನು ಒಪ್ಪಿಕೊಳ್ಳಬೇಕು. ನಮ್ಮ ಅಭ್ಯರ್ಥಿ ಅಶೋಕ್ ಮನಗೂಳಿ ಜೆಡಿಎಸ್ ನಿಂದ ಬಂದವರು. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. ಆದರೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಾನಗಲ್ ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದ್ದು, 10 ರಿಂದ 13 ಸಾವಿರದಲ್ಲಿಗೆಲ್ಲುತ್ತೇವೆ ಎಂದುಕೊಂಡಿದ್ದೆವು. ನಮ್ಮ ಅಭ್ಯರ್ಥಿ ಮಾನೆ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿತ್ತು" ಎಂದರು.
ಇನ್ನು "ಹಾನಗಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಒಂದು ವಾರ ಪ್ರಚಾರ ಮಾಡಿದ್ದರು. ಅವರದ್ದು ಶಿಗ್ಗಾಂವ್, ಅದರ ಪಕ್ಕದಲ್ಲಿ ಹಾನಗಲ್. ಅಧಿಕಾರ ದುರುಪಯೋಗ, ಹಣ ಹಂಚಿದರು. ಆದರೂ ಅವರು ಅಲ್ಲಿ ಸೋತಿದ್ದಾರೆ. ಜನ ಇವತ್ತು ಬದಲಾವಣೆ ಬಯಸಿದ್ದಾರೆ" ಎಂದಿದ್ದಾರೆ.
ದೇಶದ 30 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆದಿದ್ದು, ಎಂಟರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ ಕಡೆ ಬೇರೆಯವರು ಗೆದ್ದಿದ್ದಾರೆ. ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದರು.