ಪಂಜಾಬ್, ನ 02 (DaijiworldNews/MS): ಪಂಜಾಬ್ ನಲ್ಲಿ ಮುಖ್ಯಮಂತ್ರಿ ಬದಲಾದರೂ ಸಹ ಚುನಾವಣೆ ಸನಿಹದಲ್ಲಿ ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಒಳಜಗಳ ಮುಂದುವರಿದಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬ್ ಸಿಎಂ ಚರಣ್ ಜೀತ್ ಸಿಂಗ್ ಛನ್ನಿ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದ್ದರು.ಈಗ ಸರ್ಕಾರದ ನಡೆಯನ್ನು ಕಾಂಗ್ರೆಸ್ ನ ಮುಖ್ಯಸ್ಥರಾಗಿರುವ ನವಜೋತ್ ಸಿಂಗ್ ಸಿಧು ತೀವ್ರವಾಗಿ ವಿರೋಧಿಸಿದ್ದಾರೆ.
ಚನ್ನಿ ಅವರು ಇತ್ತೀಚೆಗೆ ಘೋಷಿಸಿದ ಉಚಿತ ಕೊಡುಗೆಗಳನ್ನು ಉಲ್ಲೇಖಿಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಚುನಾವಣೆಗೂ ಮುನ್ನ ಲಾಲಿಪಪ್ ಗಳನ್ನು ನೀಡುವ ರಾಜಕಾರಣಿಗಳನ್ನು ಟೀಕಿಸಿದ್ದು, ಪಂಜಾಬ್ ನ ಜನಕಲ್ಯಾಣವಾಗುವುದು ಮಾರ್ಗಸೂಚಿಗಳಿಂದಲೇ ಹೊರತು, ಚುನಾವಣೆಗಳ ಸಂದರ್ಭದಲ್ಲಿ ತಂತ್ರಗಳಿಂದ ಅಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯಲ್ಲಿ ಶೇಕಡಾ 11 ರಷ್ಟು ಹೆಚ್ಚಳ ಮತ್ತು ಗೃಹ ಉಪಯೋಗಿ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್ಗೆ 3 ರೂಪಾಯಿ ಕಡಿತಗೊಳಿಸುವ ಘೋಷಣೆಯನ್ನು ಮುಖ್ಯಮಂತ್ರಿ ಪ್ರಕಟಿಸಿದ ಬೆನ್ನಲ್ಲೇ ನಂತರ ಪಂಜಾಬ್ನಲ್ಲಿ ಅವರ ಸ್ವಂತ ಸರ್ಕಾರದ ವಿರುದ್ಧ ಸಿಧು ವಾಗ್ದಾಳಿ ನಡೆಸಿದರು..
ಕೊನೆಯ ಎರಡು ತಿಂಗಳಲ್ಲಿ ಜನತೆಗೆ ಲಾಲಿಪಪ್ ನ್ನು ನೀಡುತ್ತಾರೆ. ಆದರೆ ಪ್ರಶ್ನೆ ಇರುವುದು ಎಲ್ಲಿಂದ ಸರ್ಕಾರ ನೀಡುತ್ತದೆ? ಜನರಿಗೆ ಸುಳ್ಳು ಭರವಸೆ ನೀಡಿ ಸರ್ಕಾರ ರಚಿಸುವುದೇ ಉದ್ದೇಶವೇ? ಎಂದು ಪ್ರಶ್ನಿಸಿದ್ದಾರೆ.
ರಾಜಕಾರಣಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಉಚಿತ ಉಡುಗೊರೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಓಲೈಸುವ ತಂತ್ರಗಳಲ್ಲಿ ತೊಡಗಬೇಡಿ ಎಂದು ಸಲಹೆ ನೀಡಿದ ಅವರು, ರಾಜ್ಯದ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಕಾರ್ಯಸೂಚಿಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.