ಬೆಂಗಳೂರು, ನ 02 (DaijiworldNews/MS): ಕೋವಿಡ್ ಆತಂಕ ನಿಧಾನಗತಿಯಲ್ಲಿ ತಗ್ಗುತ್ತಿರುವಂತೆಯೇ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಚಿಣ್ಣರ ಆಗಮನಕ್ಕೆ ಅಂಗನವಾಡಿಗಳೂ ಸಜ್ಜಾಗಿವೆ. ರಾಜ್ಯಾದ್ಯಂತ ನ. 8ರಿಂದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಂಗನವಾಡಿಗಳನ್ನು ತೆರೆಯುವಂತೆ ಸರಕಾರ ಸೂಚಿಸಿದೆ.
ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಫಲಾನುಭವಿಗಳು ಬರುವುದನ್ನು ನಿರ್ಬಂಧಿಸಲಾಗಿತ್ತು. ಅಲ್ಲದೇ ಫಲಾನುಭವಿಗಳ ಮನೆಗೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿತ್ತು. ರಾಜ್ಯ ಸರ್ಕಾರವು ಪತ್ರದಲ್ಲಿ ಶೇ.2ಕ್ಕಿಂತ ಕಡಿಮೆ ಟಿಪಿಆರ್ ಇರುವ ತಾಲ್ಲೂಕುಗಳಲ್ಲಿ ಕೋವಿಡ್-19 ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಲಸಿಕೆ ಪಡೆದಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಮೂಲಕ ಸೇವೆಗಳನ್ನು ಒದಗಿಸಲು 2 ಗಂಟೆಗಳ ಕಾಲ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯುವುವಂತೆ ಸೂಚಿಸಲಾಗಿದೆ. ವಿಶೇಷವೆಂದರೆ ಕೇಂದ್ರಕ್ಕೆ ಬರುವ ಎಲ್ಲರಿಗೂ ಕೈ ತೊಳೆಯಲು ಸೋಪು ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಎಲ್ಲ ಮಕ್ಕಳು ಪ್ರತೀ 30 ನಿಮಿಷಕ್ಕೊಮ್ಮೆ ಕೈ ತೊಳೆಯಬೇಕು.ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ. ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹಾಗೂ ಹಾಜರಾಗುವ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಸಂದರ್ಶಕರಿಗೆ ನಿರ್ಬಂಧವಿರಲಿದೆ.