ಬೆಂಗಳೂರು, ನ 02 (DaijiworldNews/MS): ನಟ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ, ಅವರ ದಿಢೀರ್ ಅಗಲಿಕೆಯೂ 3 ದಿನ ಕಳೆದಿದ್ದರೂ ಕುಟುಂಬಸ್ಥರು ಮತ್ತು ಅಭಿಮಾನಿಗಳ ಮನದಲ್ಲಿನ ನೋವು ಕಿಂಚಿತ್ತೂ ಕರಗಿಲ್ಲ. ಇಂತಹ ನೋವಿನ ಸಂದರ್ಭದಲ್ಲೂ ಕಿಡಿಗೇಡಿಗಳು ಪುನೀತ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿ ಕೀಳು ಮನಸ್ಥಿತಿಯನ್ನ ಪ್ರದರ್ಶಿಸಿ ಅಗಲಿದ ಅಪ್ಪು ಬಗ್ಗೆ ಅವಹೇಳನಕಾರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಆತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಸೈಬರ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಅ.29ರಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಗಲಿಕೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರಲ್ಲಿ ಭಾನುವಾರದವರೆಗೂ ಬಾರ್ ಮತ್ತು ಪಬ್ಗಳನ್ನ ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಕುಡಿದ ಅಮಲಿನಲ್ಲಿ ಕೆಲ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾದರೆ ಕಷ್ಟ ಎಂದು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬಾರ್ಗಳನ್ನ ಬಂದ್ ಮಾಡಿಸಿತ್ತು. ಇದರಿಂದ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಮಂದಿಗೆ ಇದರಿಂದ ಕಿರಿಕಿರಿ ಆಗಿತ್ತು. ಹಾಗಾಗಿ ಪುನೀತ್ ರಾಜ್ಕುಮಾರ್ಗೆ ಅಗೌರವ ತೋರುವಂತಹ ಪೋಸ್ಟ್ಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರಿತ್ವಿಕ್ಸ್ (ritvikks) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೀರಾ ಅಶ್ಲೀಲ ಪದಗಳನ್ನು ಬಳಸಿ ಪುನೀತ್ ರಾಜ್ಕುಮಾರ್ ಅವರಿಗೆ ಅವಮಾನ ಮಾಡಲಾಗಿತ್ತು.ನಿಷೇಧದ ನಡುವೆಯೂ ರಿತ್ವಿಕ್ಸ್ ಎಂಬ ಈ ವ್ಯಕ್ತಿಗೆ ಲಿಕ್ಕರ್ ಸಿಕ್ಕಿತ್ತು. ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಶ್ಲೀಲ ಪದಗಳಿಂದ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನಿಸಿದ್ದ. ಬಿಯರ್ ಬಾಟಲಿಯ ಚಿತ್ರ ಹಂಚಿಕೊಂಡು, ‘ರಾಜ್ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಆತ ಬರೆದುಕೊಂಡಿದ್ದ.
ಇಂಹತ ವಿಕೃತ ಮನಸ್ಸಿನ ಕಿಡಿಗೇಡಿಗಳಿಗೆ ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. 'ಜನರಿಗೆ ಮನುಷ್ಯತ್ವ ಇಲ್ಲವೇ? ಮದ್ಯಕ್ಕಾಗಿ ಪುನೀತ್ ಬಗ್ಗೆ ಇಂಥ ಮನಸ್ಥಿತಿಯೇ?' ಎಂದು ಪ್ರಶ್ನಿಸಿರುವ ಸಾನ್ವಿ, 'ಕರ್ನಾಟಕ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿತ್ತು. ಬೆಂಗಳೂರಲ್ಲಿ ವಾಸವಿರುವ ಉತ್ತರ ಭಾರತದವರು ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿ' ಎಂದು ಛಾಟಿ ಬೀಸಿದ್ದರು. ಈತನ ನಡವಳಿಕೆ ವಿರುದ್ದ ಜನರ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಿಡಿಗೇಡಿಯ ಬಂಧನದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು , "ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ" ಎಂದು ಹೇಳಿದ್ದಾರೆ.