ಬೆಳಗಾವಿ, ನ.01 (DaijiworldNews/PY): ಕರ್ನಾಟಕ ರಾಜ್ಯೋತ್ಸವ ಬಹಿಷ್ಕರಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ನಡೆಸಿದ ಕರಾಳ ದಿನಾಚರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, "ಆನೆ ಹೋಗುವಾಗ ನಾಯಿ ಬೊಗಳಿದರೆ ಏನೂ ಆಗಲು ಸಾಧ್ಯವಿಲ್ಲ" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಂಇಎಸ್ಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತೇವೆ. ಎಲ್ಲರನ್ನೂ ಸರ್ಕಾರ ಪ್ರೀತಿ, ವಿಶ್ವಾಸದಿಂದ ಒಟ್ಟಾಗಿ ತೆಗೆದುಕೊಂಡು ಹೋಗಲಿದೆ" ಎದು ಹೇಳಿದ್ದಾರೆ.
"ಪಾಕಿಸ್ತಾನದೊಂದಿಗೆ ಕಚ್ಚಾಡಿದಂತೆ ಕರ್ನಾಟಕ, ಮಹಾರಾಷ್ಟ್ರದವರೂ ಆಡಬಾರದು. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಬೆಳಗಾವಿಯಲ್ಲಿ ಹೆಚ್ಚಿನ ಬದಲಾವಣೆಯಾಗಿದೆ. ಕೆಲವು ಕಿಡಿಗೇಡಿಗಳು ಕರಾಳ ದಿನಾಚರಣೆ ಮಾಡುತ್ತಾರೆ. ಅಂಥವರಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ" ಎಂದು ತಿಳಿಸಿದ್ದಾರೆ.
"ಬೆಳಗಾವಿ ಜಿಲ್ಲೆಯ ಓರ್ವರಿಗೆ ಮಾತ್ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ನನಗೆ ಕೂಡಾ ಅಸಮಾಧಾನವಿದೆ. ಬೆಳಗಾವಿಗೆ ಕನಿಷ್ಠ ಮೂರು ಪ್ರಶಸ್ತಿ ಬರಬೇಕಿತ್ತು. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ" ಎಂದಿದ್ದಾರೆ.