ಬೆಂಗಳೂರು, ನ 01 (DaijiworldNews/MS): ಬ್ರಿಟಿಷರ ಕಾಲದಿಂದಲೂ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿರುವ ಕವಾಯತು ಅಜ್ಞೆ ಸೇರಿದಂತೆ ಎಲ್ಲ ಆದೇಶಗಳನ್ನು ಕನ್ನಡದಲ್ಲಿಯೇ ನೀಡುವ ಪದ್ಧತಿಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, " ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದರೂ ಇಂಥದೊಂದು ಪ್ರಯತ್ನ ನಡೆದಿರಲಿಲ್ಲ. ಕನ್ನಡದ ಪ್ರಗತಿಯಾದರೆ ಕರ್ನಾಟಕವೂ ಪ್ರಗತಿಯಾಗುತ್ತದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪೊಲೀಸ್ ಕವಾಯತಿನ ನಿರ್ದೇಶನ ಸೇರಿದಂತೆ ಎಲ್ಲ ಆದೇಶಗಳನ್ನು ಕನ್ನಡದಲ್ಲಿಯೇ ನೀಡುವ ಪದ್ಧತಿಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು
ಈಗ ಕವಾಯತು ಕಮಾಂಡಗಳು ಆಂಗ್ಲ ಭಾಷೆಯಲ್ಲಿವೆ. ಮುಂದಿನ ದಿನಗಳಲ್ಲಿ ಕವಾಯತು ಕಮಾಂಡಗಳನ್ನು ಕನ್ನಡದಲ್ಲಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ದೇಶದಲ್ಲಿ ಹಿಂದಿಯಲ್ಲಿ ಮಾತ್ರ ಭಾಷಾಂತರಿಸಲಾಗಿದೆ. ಅದು ಬಿಟ್ಟರೆ ಬೇರೆ ಭಾಷೆಗೆ ಭಾಷಾಂತರಿಸಿ ಉದಾರಣೆಗೆಳು ಇಲ್ಲ.ಇದು ರಾಜ್ಯದಲ್ಲೇ ಮೊದಲ ಪ್ರಯತ್ನ. ಕನ್ನಡ ಆಡಳಿತ ಭಾಷೆ ಎನ್ನುವ ಆಶಯಕ್ಕೆ ಇದು ಪೂರಕವಾಗಲಿದೆ ಎಂದರು.