ಕೊಚ್ಚಿ, ನ.01(DaijiworldNews/HR): ಸೋಮವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ 2019ರಲ್ಲಿ ಮಿಸ್ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ ಆನ್ಸಿ ಕಬೀರ್ (24) ಮತ್ತು ಅದೇ ಸ್ಫರ್ದೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ಸಾವನ್ನಪ್ಪಿರುವ ಘಟನೆ ಕೊಚ್ಚಿಯ ವೈಟ್ಟಿಲ್ಲಾದಲ್ಲಿ ನಡೆದಿದೆ.
ಆನ್ಸಿ ಮತ್ತು ಅಂಜನಾ ಪ್ರಯಾಣಿಸುತ್ತಿದ್ದ ಕಾರು ವೈಟಿಲ ಕಡೆಯಿಂದ ಬರುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮರಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಇನ್ನು ಆನ್ಸಿ ಮತ್ತು ಅಂಜನಾ ಜೊತೆ ತ್ರಿಶೂರ್ ಮೂಲದ ಅಬ್ದುಲ್ ರೆಹಮಾನ್ ಮತ್ತು ಮುಹಮ್ಮದ್ ಆಸಿಫ್ ಕೂಡ ಕಾರಿನಲ್ಲಿದ್ದು, ಅವರಿಬ್ಬರು ಗಂಭೀರ ಗಾಯಗೊಂಡು ಅವರನ್ನು ಎರ್ನಾಕುಲಂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವೈಟ್ಟಿಲ್ಲಾದಲ್ಲಿನ ಅಂಗಡಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.