ನವದೆಹಲಿ, ನ.01(DaijiworldNews/HR): ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಂದಿನಿಂದ 266 ರೂ. ಏರಿಕೆಯಾಗಿದ್ದು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2000.50 ರೂ. ಆಗಿದೆ. ಆದರೆ, ದೇಶೀಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
ಸಾಂದರ್ಭಿಕ ಚಿತ್ರ
ಅಕ್ಟೋಬರ್ 1ರಂದು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಅನ್ನು 1693 ರೂ.ಗಳಿಂದ 1734 ರೂ.ಗೆ ಹೆಚ್ಚಿಸಲಾಗಿದೆ. ಇದು ಕೋಲ್ಕತ್ತಾದಲ್ಲಿ 1805.50 ರೂ, ಮುಂಬೈನಲ್ಲಿ 1685 ರೂ. ಮತ್ತು ಚೆನ್ನೈನಲ್ಲಿ 1867.50 ರೂ. ಆಗಿತ್ತು.
ಅಕ್ಟೋಬರ್ 6 ರಂದು ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ರೂ. 15 ಹೆಚ್ಚಿಸಲಾಗಿದ್ದು, ಅದಕ್ಕೂ ಮೊದಲು, ಅಕ್ಟೋಬರ್ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ದರಗಳನ್ನು ರೂ. 25 ಹೆಚ್ಚಿಸಲಾಯಿತು.
ಮತ್ತೊಂದೆಡೆ ಡಿಸೇಲ್, ಪೆಟ್ರೋಲ್ ಬೆಲೆ 100ರ ಗಡಿದಾಟಿ, ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಇದೇ ಸಂದರ್ಭದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ರೂ.266 ಏರಿಕೆ ಮಾಡಿ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ.