ಬೆಂಗಳೂರು, ನ.01 (DaijiworldNews/PY): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದಿಂದ ಅನಾಥಪ್ರಜ್ಞೆಯಿಂದ ಬಳಲುತ್ತಿದ್ದ 1,800 ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ತಮಿಳು ನಟ ವಿಶಾಲ್ ಘೋಷಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಶಾಲ್, "ಪುನೀತ್ ಅವರು ಒಳ್ಳೆಯ ನಟ ಮಾತ್ರ ಅಲ್ಲ. ಅವರು ಒಳ್ಳೆಯ ಸ್ನೇಹಿತ, ಒಳ್ಳೆಯ ವ್ಯಕ್ತಿ. ಇಂದು ಅವರು ನಮ್ಮೊಂದಿಗೆ ಇಲ್ಲ ಎಂದು ಊಹಿಸಿಕೊಳ್ಳಲು ಆಗುತ್ತಿಲ್ಲ. ಅವರ ನಿಧನದಿಂದ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೇ, ಸಮಾಜಕ್ಕೆ, ಕುಟುಂಬಕ್ಕೆ ಹಾಗೂ ಅವರೊಂದಿಗಿದ್ದವರಿಗೆ ದೊಡ್ಡ ನಷ್ಟ" ಎಂದಿದ್ದಾರೆ.
"1,800 ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಅನಾಥಾಶ್ರಮ, ವೃದ್ಧಾಶ್ರಮ ನಡೆಸುವದರೊಂದಿಗೆ ತಮ್ಮ ಸಾವಿನ ಬಳಿಕ ಪುನೀತ್ ಕಣ್ಣುಗಳನ್ನೂ ದಾನ ಮಾಡಿದ್ದಾರೆ. ಪುನೀತ್ ಅವರ ಗೆಳೆಯನಾಗಿ ನಾನು ಮಾತು ಕೊಡುತ್ತಿದ್ದೇನೆ. 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ಮುಂದಿನ ವರ್ಷದಿಂದ ನಿಮ್ಮ ಫೌಂಡೇಶನ್, ನಿಮ್ಮ ಸಮಾಜಸೇವೆಯನ್ನು ನಾನು ಮುಂದುವರಿಸುತ್ತೇನೆ" ಎಂದು ಭರವಸೆ ನೀಡಿದ್ದಾರೆ.