ನವದೆಹಲಿ, ನ.01 (DaijiworldNews/PY): ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಶುಭಕೋರಿದ್ದಾರೆ.
ಕನ್ನಡದಲ್ಲಿ ಟ್ವೀಟ್ ಮಾಡಿರುವ ಅವರು, "ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ" ಎಂದಿದ್ದಾರೆ.
"ಸಮಸ್ತ ಕನ್ನಡಿಗರಿಗೆ 66ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾಡು-ನುಡಿ ರಕ್ಷಣೆಯ ಜೊತೆಗೆ ಸಮೃದ್ಧ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ!" ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
"ಕನ್ನಡ, ಕನ್ನಡಿಗ ಮತ್ತು ಕರ್ನಾಟಕವನ್ನು ಒಳಗೊಂಡ ಒಟ್ಟು ಕನ್ನಡತನದ ಬದುಕು ಹಸನಾಗಿಸುವ ಗುರಿ ನಮ್ಮದಾಗಿರಲಿ. ಕನ್ನಡವನ್ನು ಉಳಿಸೋಣ, ಬೆಳೆಸೋಣ. ರಾಜ್ಯದ ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
"ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಉಳಿಸೋಣ, ಕನ್ನಡ ಬೆಳೆಸೋಣ - ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ! ಜೈ ಭುವನೇಶ್ವರಿ !" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, "ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅವಿರತ ಪ್ರಯತ್ನದಿಂದಾಗಿ ಹರಿದುಹೋಗಿದ್ದ ಕರುನಾಡು ಕರ್ನಾಟಕ ರಾಜ್ಯವಾಗಿ ರೂಪುಗೊಂಡಿತು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ರಾಜ್ಯೋತ್ಸವ ದಿನವಾದ ಇಂದು ನಮನಗಳನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, "ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಲಿ. ಉಸಿರಿನ ಪ್ರತಿ ಕಣಕಣದಲ್ಲೂ ಕನ್ನಡವಿರಲಿ. ನಮ್ಮ ಆಶಯವೇ ಇದಾಗಿರಲಿ. 1,500 ವರ್ಷಗಳಿಗೂ ಹೆಚ್ಚು ಘನ ಇತಿಹಾಸವುಳ್ಳ ಕನ್ನಡ, ಶಾಸ್ತ್ರೀಯ ಸ್ಥಾನ ಅಲಂಕರಿಸಿದ ಅಭಿಜಾತ ಕನ್ನಡ, ಅಷ್ಟ ಜ್ಞಾನಪೀಠಗಳ ಮೇರುಗನ್ನಡ, ನಮ್ಮ ಬದುಕು-ಬಾಳ್ವೆಯ ತಾಯ್ಗನ್ನಡ. ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವಭಾಷೆ. ನಮ್ಮ ಮನಸು-ಕನಸುಗಳನ್ನು ಅರಳಿಸಿ ಭವಿಷ್ಯದ ರೆಕ್ಕೆಕೊಟ್ಟು ಹಾರಲು ಶಕ್ತಿ ತುಂಬುವ ಜೀವಭಾಷೆ" ಎಂದು ತಿಳಿಸಿದ್ದಾರೆ.
"ಕನ್ನಡಿಗರ ಮನೆ-ಮನದಲ್ಲೂ ಕನ್ನಡ ಬೆಳಗುತ್ತಿದೆ, ನಿಜ. ಆದರೆ, ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್ ರಾಜಕುಮಾರ್ ಅವರು ಕನ್ನಡ ಹಬ್ಬಕ್ಕೆ ಮುನ್ನ ನಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದುಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಆ ಮೂಲಕ ಪುನೀತರಾಗೋಣ. ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಈ ವರ್ಷ ಕನ್ನಡದ ಹಬ್ಬವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಾ, ಮತ್ತೊಮ್ಮೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ" ಎಂದಿದ್ದಾರೆ.