ಭುವನೇಶ್ವರ್, ಅ.31 (DaijiworldNews/PY): ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಕೇಂದ್ರ ಸಚಿವರ ಪುತ್ರನ ಕೈವಾಡ ಆರೋಪ ಹಿನ್ನೆಲೆ, ಕೈ ಕಾರ್ಯಕರ್ತರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಾಹನದ ಮೇಲೆ ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ನಡೆದಿದೆ.
ಅಜಯ್ ಮಿಶ್ರಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ವೇಳೆ ಈ ಘಟನೆ ನಡೆದಿದೆ.
ಎನ್ ಎಸ್ ಯುಐ ರಾಜ್ಯ ಘಟಕದ ಅಧ್ಯಕ್ಷ ಯಾಸಿರ್ ನವಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಈ ಹಿಂದೆ ಒಡಿಶಾ ಭೇಟಿ ಬೇಡ ಎಂದು ಸೂಚಿಸಿದ್ದೆವು. ಸಚಿವರ ಕಾರಿನ ಮೇಲೆ ಮೊಟ್ಟೆ ಎಸೆಯುವ ಮೂಲಕ ಅವರ ಭೇಟಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಅವರ ಭೇಟಿ ಸಂದರ್ಭ ಇತರೆ ಕಡೆಯಲ್ಲಿಯೂ ಅವರು ಕಾಣಿಸಿಕೊಳ್ಳುವುದಕ್ಕೂ ನಾವು ವಿರೋಧ ವ್ಯಕ್ತಪಡಿಸುತ್ತೇವೆ" ಎಂದಿದ್ದಾರೆ.
"ಲಖಿಂಪುರ್ ಖೇರಿ ಹಿಂಸಾಚಾರ ಘಟನೆಯಲ್ಲಿ ಅಮಿತ್ ಮಿಶ್ರಾ ಅವರ ಪುತ್ರ ತೊಡಗಿಸಿಕೊಂಡಿರುವ ಆರೋಪದ ಹಿನ್ನೆಲೆ ತಮ್ಮ ಸ್ಥಾನಕ್ಕೆ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.