ಮುಂಬೈ, ಅ.31 (DaijiworldNews/PY): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಬಂಧಿಸಿದ್ದ ರೂಪದರ್ಶಿ ಮುನ್ಮುನ್ ಧಮೇಚಾ ಅವರನ್ನು ಜಾಮೀನು ದೊರೆತ ಮೂರು ದಿನಗಳ ಬಳಿಕ ಬೈಕುಲ್ಲಾ ಮಹಿಳಾ ಜೈಲಿನಿಂದ ಭಾನುವಾರ ಬಿಡುಗಡೆ ಮಾಡಲಾಗಿದೆ.
ಪ್ರಕರಣ ಪ್ರಮುಖ ಆರೋಪಿಗಳಾದ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಅರ್ಬಾಜ್ ಮರ್ಚೆಂಟ್ ಅವರೊಂದಿಗೆ ಸಹ ಆರೋಪಿ ಧಮೇಚಾ ಅವರಿಗೂ ಕೂಡಾ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು.
ಧಮೇಚಾ ಪರ ವಕೀಲ ಅಲಿ ಕಾಶಿಫ್ ಖಾನ್ ಈ ಬಗ್ಗೆ ಮಾತನಾಡಿದ್ದು, ಎಲ್ಲಾ ಕಾನೂನು ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಧರ್ಮೇಚಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರು ಮಧ್ಯಪ್ರದೇಶಕ್ಕೆ ತೆರಳಲು ಅನುಮತಿ ಕೋರಿ ನಾವು ಈಗ ಎನ್ಸಿಬಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದೇವೆ ಎಂದಿದ್ದಾರೆ.
ಧಮೇಚಾ ಅವರ ಸಹ ಆರೋಪಿ ಅರ್ಬಾಜ್ ಮರ್ಚೆಂಟ್ ಆರ್ಥರ್ ರೋಡ್ ಜೈಲಿನಲ್ಲಿದ್ದು, ಅವರನ್ನು ಇನ್ನು ಬಿಡುಗಡೆ ಮಾಡಬೇಕಿದೆ. ಆರ್ಥರ್ ಜೈಲಿನಲ್ಲಿದ್ದ ಆರ್ಯನ್ ಖಾನ್ ಶನಿವಾರ ಮನೆಗೆ ವಾಪಾಸ್ಸಾಗಿದ್ದಾರೆ.