ಬಿಜನೋರ್, ಅ.31 (DaijiworldNews/PY): ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ 35 ವರ್ಷ ವಯಸ್ಸಿನ ಮಹಿಳೆಯನ್ನು ಹಾಡುಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಬಿಜನೋರ್ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಉತ್ತರ ಪ್ರದೇಶದ ಬಿಜನೋರ್ನ ಸುರೇಂದ್ರ ನಗರ ಕಾಲೊನಿ ನಿವಾಸಿಪ್ರಿಯಾ ಶರ್ಮಾ ಎಂದು ಗುರುತಿಸಲಾಗಿದೆ.
ಅ.29ರ ಶುಕ್ರವಾರದಂದು ಬೆಳಗ್ಗೆ 11.30ರ ವೇಳೆಗೆ ಕೆಲಸ ಮುಗಿಸಿ ಕಾಲೇಜಿನಿಂದ ಮನೆಗೆ ಹಿಂತಿರುಗಿದ್ದ ಸಂದರ್ಭ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ಸದ್ದು ಕೇಳಿ ಸ್ಥಳೀಯ ನಿವಾಸಿಗಳು ಬಂದು ನೋಡಿದ ಸಂದರ್ಭ ಪ್ರಿಯಾ ಶರ್ಮಾ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೈಕ್ನಲ್ಲಿ ಬಂದಿದ್ದ ಇಬ್ಬರೂ ಹಲ್ಲೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಿಯಾ ಶರ್ಮಾ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
"ಪ್ರಿಯಾ ಶರ್ಮಾ ಅವರು ಎಂಟು ವರ್ಷಗಳಿಂದ ಇಂಗ್ಲೀಷ್ ಉಪನ್ಯಾಸಕಿಯಾಗಿ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದ ಭಟವಾಲಿ ಗ್ರಾಮದ ಕಮಲ್ ದತ್ ಶರ್ಮಾ ಎಂಬವರನ್ನು ವಿವಾಹವಾಗಿದ್ದರು. ಅ.28ರ ಗುರುವಾರದಂದು ಪತಿ ಹಾಗೂ ಕುಟುಂಬದ ಸದಸ್ಯರ ವಿರುದ್ದ ವರದಕ್ಷಿಣೆ ಕಿರುಕುಳದ ದೂರು ಸಲ್ಲಿಸಿದ್ದಳು" ಎಂದು ಬಿಜನೋರ್ ಎಸ್ಪಿ ಧರಂವೀರ್ ಸಿಂಗ್ ಹೇಳಿದ್ದಾರೆ.
"ಈ ಹಿಂದೆಯೂ ಅಳಿಯ ಕಮಲ್ ಆರ್ಮಾ ಪ್ರಿಯಾಳ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದ. ಆತನೇ ಆಕೆಯನ್ನು ಸಾಯಿಸಿದ್ದು" ಎಂದು ಪ್ರಿಯಾಳ ಪೋಷಕರು ಆರೋಪಿಸಿದ್ದಾರೆ.
ಪೊಲೀಸರು ಕಮಲ್ ಶರ್ಮಾ ಹಾಗೂ ಕುಟುಂಬದ ವಿರುದ್ದ ಕೊಲೆ ಆರೋಪ ದಾಖಲಿಸಿದ್ದ, ಮೂರು ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.