ಬೆಂಗಳೂರು, ಅ.31 (DaijiworldNews/HR): ನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ನಟ ಶಿವರಾಜ್ಕುಮಾರ್ ತಮ್ಮನ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾಗಿದ್ದು, ಅಭಿಮಾನಿಗಳೂ ಯಾರೂ ಕೂಡ ಆತ್ಮಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಡಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಪ್ಪು ನಿಧನ ನಮಗಿಂತ ಹೆಚ್ಚಾಗಿ ಅಭಿಮಾನಿಗಳಿಗೆ ನೋವಾಗಿದೆ. ಅಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಅಪ್ಪು ಅಪ್ಪು ಎಂದು ಕರೆದು ಅತ್ತಾಗ ನನಗೂ ಕೊರಗಿದ್ದೆ. ಈ ನೋವು ನೋಡಿದಾಗ ಅಪ್ಪುವನ್ನು ಅವಸರವಾಗಿ ದೇವರು ಕರೆದುಕೊಂಡುಬಿಟ್ಟನೇ ಎಂದೆನಿಸಿಬಿಡುತ್ತದೆ" ಎಂದರು.
ಇನ್ನು ಸರ್ಕಾರ, ಪೊಲೀಸ್ ಸಿಬ್ಬಂದಿ ಚೆನ್ನಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಧನ್ಯವಾದ. ನಮ್ಮ ಕುಟುಂಬದ ಮೇಲೆ ಇಷ್ಟೊಂದು ಅಭಿಮಾನ ಇಟ್ಟು ಅಚ್ಚುಕಟ್ಟಿನ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು. ಅಪ್ಪಾಜಿ ನಿಧನರಾಗಿದ್ದ ಸಂದರ್ಭದಲ್ಲಿ ಬಹಳ ಕಷ್ಟವಾಗಿತ್ತು. ನಿಮ್ಮ ಅಪ್ಪುವನ್ನು ನೀವು ನೋಡದೆ ಮತ್ತಿನ್ಯಾರು ನೋಡಬೇಕು. ಖಂಡಿತವಾಗಿಯೂ ಹಾಲು–ತುಪ್ಪ ಆದ ಕೂಡಲೇ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತೇನೆ. ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಎಷ್ಟೇ ಬೆಲೆ ಕಟ್ಟಿದರೂ ಕಡಿಮೆಯೇ" ಎಂದಿದ್ದಾರೆ.
ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಡಿ. ನಿಮಗೂ ಕುಟುಂಬವಿದೆ. ಅಪ್ಪು ಇಂಥಹ ನಿರ್ಧಾರಗಳನ್ನು ಇಷ್ಟಪಡುತ್ತಿಲ್ಲ. ದಯವಿಟ್ಟು ನಿಮ್ಮ ಕುಟುಂಬಗಳನ್ನು ನೀವು ನೋಡಿಕೊಳ್ಳಿ. ಏಕೆಂದರೆ ನಿಮ್ಮ ಅಗತ್ಯ ಕುಟುಂಬಕ್ಕೆ ಇರುತ್ತದೆ. ಇದನ್ನು ಕಳೆದುಕೊಳ್ಳಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.