ಬೆಂಗಳೂರು, ಅ.31 (DaijiworldNews/PY): "ನಟ ಶಿವರಾಜ್ ಕುಮಾರ್ ಅವರು ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಎಂತದ್ದೇ ಸಂದರ್ಭದಲ್ಲೂ ಕೂಡಾ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ನಮ್ಮ ಅಧಿಕಾರಿಗಳ ಸಹಕಾರ ನೀಡಿದ್ದಾರೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರ ತನ್ನ ಕರ್ತವ್ಯ ನಿಭಾಯಿಸಿದ್ದು, ಇದು ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯವಾಗಿತ್ತು. ಶಿವರಾಜ್ ಕುಮಾರ್ ಅವರ ಕೃತಜ್ಞತೆ ದೊಡ್ಮನೆಯ ಗುಣ" ಎಂದಿದ್ದಾರೆ.
"ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಕಳೆದ 3 ದಿನಗಳಿಂದ ಸಾರ್ವಜನಿಕ ದರ್ಶನದಿಂದ ಎಲ್ಲಾ ವ್ಯವಸ್ಥೆಯ ಕುರಿತು ಪೊಲೀಸರು ಹಾಗೂ ಅಧಿಕಾರಿಗಳು ಶ್ರಮವಹಿಸಿದ್ದಾರೆ. ಅಭಿಮಾನಿಗಳು ಶಿಸ್ತಿನಿಂದ ವರ್ತಿಸಿದ್ದಾರೆ. ಈ ವೇಳೆ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆದಿಲ್ಲ. ಪೊಲೀಸರು ಹಾಗೂ ಅಧಿಕಾರಿಗಳ ಶ್ರಮವನ್ನು ಶ್ಲಾಘಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಪುನೀತ್ ರಾಜ್ ಕುಮಾರ್ ಕುಟುಂಬದವರೂ ಕೂಡಾ ಸಹಕಾರ ನೀಡಿದ್ದು, ಅವರಿಗೂ ಧನ್ಯವಾದ" ಎಂದಿದ್ದಾರೆ.