ಚಿಕ್ಕಬಳ್ಳಾಪುರ, ಅ.31 (DaijiworldNews/PY): ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ.
ಮೃತ ಬಾಲಕನನ್ನು ಚಿಕ್ಕಬಳ್ಳಾಪುರದ ಖಲಂದರ್ ಖಾನ್ ಎಂದು ಗುರುತಿಸಲಾಗಿದೆ. ಈತ ಶಿಡ್ಲಘಟ್ಟದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ.
ಇಂದು ಬೆಳಗ್ಗೆ ಈತನ ತಂದೆ ಕೂಲಿ ಕೆಲಸಕ್ಕೆ ಹೊರಗಡೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭ ಮನೆಯಿಂದ ಹೊರಬಂದಿದ್ದ ಬಾಲಕ ಮೇಲೆ 20ಕ್ಕೂ ಅಧಿಕ ನಾಯಿಗಳು ದಾಳಿ ನಡೆಸಿವೆ.
ಬೀದಿ ನಾಯಿಗಳ ದಾಳಿಯಿಂದ ಬಾಲಕನ ಮೈ ಎಲ್ಲಾ ತೀವ್ರವಾಗಿ ಗಾಯವಾಗಿದ್ದು, ಬಾಲಕ ನಗ್ನ ಸ್ಥಿತಿಯಲ್ಲಿ ಹಳ್ಳಿ ರಸ್ತೆಯಲ್ಲಿ ಬಿದ್ದರುವುದು ಕಂಡು ಬಂದಿದೆ. ಈ ವೇಳೆ ಹಳ್ಳಿಯ ಓರ್ವರು ನಾಯಿಗಳನ್ನು ಓಡಿಸುವ ವೇಳೆಗೆ ಬಾಲಕ ಮೃತಪಟ್ಟಿದ್ದ.
ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ಹಾಗೂ ನಗರ ಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಸ್ಥಳೀಯ ಆಡಳಿತಕ್ಕೆ ತಿಳಿಸಿದರೂ ಕೂಡಾ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಶಿಡ್ಲಘಟ್ಟ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ.