ಬೆಂಗಳೂರು, ಅ.31 (DaijiworldNews/PY): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು.
ಪುನೀತ್ ಅವರ ಅಂತ್ಯಸಂಸ್ಕಾರವು ಈಡಿಗ ಸಂಪ್ರದಾಯದಂತೆ ನೆರವೇರಿದೆ.
ಅಪಾರ ಸಂಖ್ಯೆಯ ಜನ ಅಂತಿಮ ದರ್ಶನ ಪಡೆದ ಬಳಿಕ ಕಂಠೀರವ ಸ್ಟುಡಿಯೋದಿಂದ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತಲುಪಿತು. ಪುನೀತ್ ರಾಜ್ ಕುಮಾರ್ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುನೀತ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನೆರವೇರಿಸಿದರು.
ಪೊಲೀಸ್ ಬ್ಯಾಂಡ್, ರಾಷ್ಟ್ರಗೀತೆ ನುಡಿಸುವದರೊಂದಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುನೀತ್ ಪಾರ್ಥಿವ ಶರೀರಕ್ಕೆ ಪೊಲೀಸರು ಗೌರವವಂದನೆ ಸಲ್ಲಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದನಾಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಆರ್. ಅಶೋಕ್, ಸಿನಿಮಾ ನಟರಾದ ರವಿಚಂದ್ರನ್, ರಾಕಿಂಗ್ ಸ್ಟಾರ್ ಯಶ್, ಗಣೇಶ್, ಜಗ್ಗೇಶ್, ಕಿಚ್ಚ ಸುದೀಪ್, ದುನಿಯಾ ವಿಜಯ್, ಶ್ರೀಮುರುಳಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.