ಪುಣೆ, ಅ.30 (DaijiworldNews/PY): "ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರ ಕೇಂದ್ರದಲ್ಲಿ 2024ರಲ್ಲಿ ಅಸ್ತಿತ್ವಕ್ಕೆ ಬರಲಿದೆ" ಎಂದು ಶಿವಸೇನಾದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ತಿಳಿಸಿದ್ದಾರೆ.
ಪುಣೆ ಪ್ರೆಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಮುಂದಿನ ಸಾರ್ವತ್ರಿಕ ಚುನಾವಣೆಯ ಬಳಿಕ ಕೇಂದ್ರದಲ್ಲಿ ಒಂದು ಪಕ್ಷದ ಆಡಳಿತ ಅಂತಿಮವಾಗಲಿದೆ" ಎಂದಿದ್ದಾರೆ.
"ಕಾಂಗ್ರೆಸ್ ಪಕ್ಷ ದೇಶದಲ್ಲಿ ಬೇರು ಮಟ್ಟದಲ್ಲಿಯೂ ನೆಲೆ ಹೊಂದಿದ ಕಾರಣ ಕಾಂಗ್ರೆಸ್ ಇಲ್ಲದೇ ವಿರೋಧ ಪಕ್ಷಗಳನ್ನು ಒಳಗೊಂಡ ಯಾವುದೇ ಸರ್ಕಾರ ರಚನೆ ಅಸಾಧ್ಯ" ಎಂದು ಹೇಳಿದ್ದಾರೆ.
ಬಿಜೆಪಿ ಇನ್ನು ಕೆಲವು ದಶಕಗಳ ಕಾಲ ಅಧಿಕಾರಲ್ಲಿರಲಿದೆ ಎಂದಿದ್ದ ಪ್ರಶಾಂತ್ ಕಿಶೋರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಯು ಭಾರತದ ರಾಜಕೀಯದಲ್ಲಿ ಒಂದು ವಿರೋಧ ಪಕ್ಷವಾಗಿ ಇದ್ದೇ ಇರುತ್ತದೆ" ಎಂದಿದ್ದಾರೆ.
"ವಿಶ್ವದಲ್ಲಿ ದೊಡ್ಡ ಪಕ್ಷ ಎನ್ನುವುದಾಗಿ ಬಿಜೆಪಿ ಹೇಳಿಕೊಳ್ಳುತ್ತದೆ. ಬಿಜೆಪಿ ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಅದು ವಿರೋಧ ಪಕ್ಷವಾಗಿ ಉಳಿಯಲಿದೆ" ಎಂದು ಹೇಳಿದ್ದಾರೆ.