ಬೆಂಗಳೂರು, ಅ.30 (DaijiworldNews/PY): ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಬಹುದೆಂಬ ಭೀತಿಯ ಹಿನ್ನೆಲೆ ರಾಜ್ಯ ಸರ್ಕಾರ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರು ಸುತ್ತೋಲೆ ಹೊರಡಿಸಿದ್ದು, ಕೊರೊನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನತೆ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.
ದೀಪಾವಳಿ ಆಚರಣೆಗೆ ಮಾರ್ಗಸೂಚಿ:
* ಸವೋಚ್ಛ ನ್ಯಾಯಾಲಯದ ನಿರ್ದೇಶನಗಳಲ್ಲಿ ಅನುಮತಿಸಲಾದ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ರೀತಿಯಾದ ಇತರ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಬಳಸುವಂತಿಲ್ಲ.
* ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾಡತಕ್ಕದ್ದು.
* ನವೆಂಬರ್ 1-10ರವರೆಗೆ ಮಾತ್ರ ಹಸಿರು ಪಟಾಕಿಗಳ ಮಳಿಗೆಗೆಳನ್ನು ತೆರೆಯತಕ್ಕದ್ದು.
* ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರವೇ ಪಟಾಕಿ ಅಂಗಡಿ ತೆರೆಯುವುದು.
* ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸುವುದು.
ಕನ್ನಡ ರಾಜ್ಯೋತ್ಸವ ಆಚರಣೆಗೆ ಮಾರ್ಗಸೂಚಿಗಳು:
* ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 500 ಮಂದಿಗೆ ಮಾತ್ರವೇ ಪಾಲ್ಗೊಳ್ಳಲು ಅವಕಾಶ.
* ಸುರಕ್ಷಿತ ಅಂತರ, ಮಾಸ್ಕ್, ಸ್ಯಾನಿಟೈಸರ್ಗಳನ್ನು ಕಡ್ಡಾಯವಾಗಿ ಬಳಸಬೇಕು.
* ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆ, ವಿದ್ಯುತ್ ಇಲಾಖೆ, ಆರೋಗ್ಯ ಸಂಘ ಸಂಸ್ಥೆಗಳು, ಅಗ್ನಿಶಾಮಕ ಇಲಾಖೆ, ಮಾಲಿನ್ಯಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು.
* ರಾಜ್ಯೋತ್ಸವ ಆಚರಣೆಯ ವೇಳೆ ಹಮ್ಮಿಕೊಳ್ಳಲಾಗುವ ಸಾಂಸ್ಕೃತಿಕ, ಮನರಂಜನಾ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಕನಿಷ್ಠ ಅವಧಿಗೆ ಸೀಮಿತಗೊಳಿಸಬೇಕು.
* ಸಾಮಾಜಿಕ ಅಂತರವಿಲ್ಲದೇ ನಡೆಸುವ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗುತ್ತದೆ ಎಂದು ತಿಳಿಸಲಾಗಿದೆ.