ನವದೆಹಲಿ, ಅ.30 (DaijiworldNews/PY): "ಈಗಾಗಲೇ ಕೊವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರಿಗೆ ಮತ್ತೆ ಕೋವಿಶೀಲ್ಡ್ ಲಸಿಕೆ ನೀಡುವಂತೆ ಕೇಂದ್ರಕ್ಕೆ ಸೂಚನೆ ನೀಡಿ ಜನರ ಜೀವದೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಕೊವ್ಯಾಕ್ಸಿನ್ ಕೊರೊನಾ ಲಸಿಕೆಗೆ ಲಭಿಸದ ಕಾರಣ ವಿದೇಶಗಳಿಗೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
"ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದೆ ಎನ್ನುವ ಬಗ್ಗೆ ನಾವು ದಿನಪತ್ರಿಕೆಗಳಲ್ಲಿ ಓದಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕ್ರಿಯೆಗಾಗಿ ನಾವು ನಿರೀಕ್ಷಿಸೋಣ. ಈ ಬಗ್ಗೆ ದೀಪಾವಳಿಯ ರಜೆ ಬಳಿಕ ಮತ್ತೆ ಕೈಗೆತ್ತಿಕೊಳ್ಳೋಣ" ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಬಿ ವಿ ನಾಗರತ್ನ ಅವರ ಪೀಠ ತಿಳಿಸಿದೆ.
"ಕೊವ್ಯಾಕ್ಸಿನ್ಗೆ ವಿಶ್ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆಯದಿರುವ ಕಾರಣದಿಂದ ಪ್ರತಿ ದಿನ ವಿದೇಶಗಳಿಗೆ ತೆರಳಲು ಬಯಸುವವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಪ್ರಸ್ತುತ ವ್ಯವಸ್ಥೆಯಡಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಪಡೆಯಲು ಸಾಧ್ಯವಿಲ್ಲ. ಆದರೆ, ಈ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು" ಎಂದು ಅರ್ಜಿದಾರ, ವಕೀಲ ಕಾರ್ತಿಕ್ ಸೇಠ್ ತಮ್ಮ ಪರ ವಾದ ಮಂಡಿಸಿದ್ದಾರೆ.