ಬೆಂಗಳೂರು, ಅ. 30(DaijiworldNews/HR): ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ನಾಳೆ ನೆರವೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರಕ್ಕೆ ಅವರಸ ಮಾಡುವುದಿಲ್ಲ. ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಎಲ್ಲರೊಂದಿಗೂ ಮಾತನಾಡಿದ್ದೇವೆ. ಅಭಿಮಾನಿಗಳು ಬಹಳಷ್ಟು ಜನರು ಅವರ ಅಂತಿಮ ದರ್ಶನ ಮಾಡಬೇಕಿದೆ" ಎಂದರು.
ಇನ್ನು ಅನೇಕ ಜನ ಅಭಿಮಾನಿಗಳು, ಗಣ್ಯರು ನಟ ಪುನೀತ್ ರಾಜ್ ಕುಮಾರ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಸಮಯವಾಗಿದೆ. ರಾತ್ರಿಯ ವೇಳೆಗೆ ಅಂತ್ಯಕ್ರಿಯೆ ಮಾಡುವುದು ಸವಾಲಿನ ವಿಚಾರವಾಗಿದೆ. ಈ ಎಲ್ಲಾ ನಿಟ್ಟಿನಲ್ಲಿ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜೊತೆಗೆ ಮಾತುಕತೆ ನಡೆಸಿ, ನಾಳೆ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಪುತ್ರಿ ದೆಹಲಿಯನ್ನು ನ್ಯೂಯಾರ್ಕ್ ನಿಂದ ತಲುಪಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಆಗಮಿಸುತ್ತಾ ಇದ್ದಾರೆ. ಅವರು ಬರೋದು ತಡವಾಗ್ತಾ ಇದೆ. ರಾತ್ರಿ ಚಿಕ್ಕ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸೋದು ಕಷ್ಟವಾಗಿದೆ ಎಂದು ಹೇಳಿದ್ದಾರೆ.