ಲಕ್ನೋ, ಅ.30 (DaijiworldNews/PY): ಗಾಳಿಯ ಗುಣಮಟ್ಟ ಕಳಪೆ ದರ್ಜೆಯಲ್ಲಿರುವ ಹಿನ್ನೆಲೆ ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಇತರ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ನಿಷೇಧಿಸಿರುವುದಾಗಿ ತಿಳಿಸಿದೆ.
ಗಾಳಿಯ ಗುಣಮಟ್ಟ ಉತ್ತಮಗೊಳಿಸಿವ ಸಲುವಾಗಿ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಕೆ ಮಾಡಲು ಅನುಮತಿ ನೀಡಿರುವುದಾಗಿ ಉತ್ತರಪ್ರದೇಶ ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಗೃಹ ಕಾರ್ಯದರ್ಶಿ ಅವ್ನೀಶ್ ಕುಮಾರ್ ಅವಾಸ್ಥಿ, "ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾದಿಕಾರಿಗಳಿಗೆ, ಹಸಿರು ಪಟಾಕಿ ಮಾರಾಟ ಹಾಗೂ ಬಳಕೆಗೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.
"ಎರಡು ಗಂಟೆಗಳಿಗಿಂತ ಹೆಚ್ಚು ಹಸಿರು ಪಟಾಕಿಗಳನ್ನು ಸಿಡಿಸುವಂತಿಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆರಂಭದಲ್ಲಿಯೂ ಕೂಡಾ 11.55ರ ರಾತ್ರಿಯಿಂದ 12.30ರವರೆಗೆ ಮಾತ್ರವೇ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ" ಎಂದಿದ್ದಾರೆ.