ಬೆಂಗಳೂರು, ಅ.30 (DaijiworldNews/PY): ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಮತ್ತು ಕರ್ನಾಟಕದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಮಾಜಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್ಜಕುಮಾರ್ ಅವರ ನಿಧನಕ್ಕೆ ಮಲಬಾರ್ ಗ್ರೂಪ್ ಅಧ್ಯಕ್ಷ ಎಂಪಿ ಅಹ್ಮದ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ಪುನೀತ್ ರಾಜ್ಕುಮಾರ್ ಅವರು ಮಲಬಾರ್ ಕುಟುಂಬದ ಗೌರವಾನ್ವಿತ ಸದಸ್ಯರಾಗಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಲನಚಿತ್ರ ಉದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅಹ್ಮದ್ ತಿಳಿಸಿದ್ದಾರೆ.
"ಕರ್ನಾಟಕದಲ್ಲಿ ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ಅವರು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅನ್ನು ಕರ್ನಾಟಕದ ಜನತೆಗೆ ಪರಿಚಯಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ನಮ್ಮ ಬ್ರ್ಯಾಂಡ್ ಜೊತೆಗೆ ಅವರು ಹೊಂದಿದ ಸಹಭಾಗಿತ್ವ ಅತ್ಯಂತ ಅಮೂಲ್ಯವಾಗಿತ್ತು ಮತ್ತು ಅವರ ಅಕಾಲಿಕ ನಿಧನದಿಂದ ನನಗೆ ತೀವ್ರ ಆಘಾತ ಉಂಟಾಗಿದೆ" ಎಂದು ಅಹ್ಮದ್ ಕಂಬನಿ ಮಿಡಿದಿದ್ದಾರೆ.