ಚಾಮರಾಜನಗರ, ಅ.30 (DaijiworldNews/PY): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನ ಸುದ್ದಿ ಕೇಳಿ ಮನನೊಂದಿದ್ದ ಅಭಿಮಾನಿಯೋರ್ವರು ಬ್ಲೇಡ್ನಿಂದ ಕೈ, ಎದೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.
ಹೊನ್ನೂರು ಗ್ರಾಮದ ಗಣೇಶ್ (22) ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ.
ಈತ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ತೀರಾ ಬೇಸರಗೊಂಡಿದ್ದರು. ಮೊಬೈಲ್ನಲ್ಲಿ ಪುನೀತ್ ಅವರ ಅಂತಿಮ ದರ್ಶನ ನೋಡಿದ ಗಣೇಶ್ ಬ್ಲೇಡ್ನಿಂದ ಕೈ, ಎದೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಇವರನ್ನು ಸ್ನೇಹಿತರು ಯಳಂದೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಎಂಬ 30 ವರ್ಷದ ಯುವಕ ಪುನೀತ್ ರಾಜ್ಕುಮಾರ್ ಅವರ ಸಾವಿನ ಸುದ್ದಿ ತಿಳಿದು ಆಘಾತದಿಂದ ಸಾವನ್ನಪ್ಪಿದ್ದಾರೆ. ಮುನಿಯಪ್ಪ ಪುನೀತ್ ಅವರರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಎಲ್ಲಾ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ರಾಹುಲ್ ಗಾಡಿವಡ್ಡರ ಎಂಬ ಯುವಕ ಪುನೀತ್ ಅವರ ನಿಧನದ ಸುದ್ದಿ ಕೇಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿದ್ದ ರಾಹುಲ್ ಅವರು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.