ಬೆಂಗಳೂರು, ಅ.30 (DaijiworldNews/PY): "ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು" ಎಂದು ಹಿರಿಯ ನಟ್ಟ ಜಗ್ಗೇಶ್ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕನ್ನಡ ನಾಡು ನುಡಿಗಾಗಿ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿ ಎಂದು ನೀಡಿ. ಮಾನ್ಯ ಮುಖ್ಯಮಂತ್ರಿಗಳೆ ಕನ್ನಡಿಗರ ಪ್ರೀತಿಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುವುದು ಎಂದು ನನ್ನ ವಿನಂತಿ" ಎಂದು ಮನವಿ ಮಾಡಿದ್ದಾರೆ.
"ಕನ್ನಡ ಚಿತ್ರರಂಗದ ಉತ್ತಮ ನಟ, ಸಜ್ಜನಿಕೆ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರು ಮಾದರಿಯಾಗಿ ಬದುಕಿದ್ದರು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಇವರು ಕನ್ನಡ ಸಂಸ್ಕೃತಿಗೆ ಒತ್ತನ್ನು ನೀಡುವ ಮೂಲಕ ಉತ್ತಮ ಚಿಂತನೆಯನ್ನು ಹೊಂದಿದ್ದರು. ಅಲ್ಲದೇ, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಅವರಿಲ್ಲ ಎನ್ನುವುದನ್ನು ನಂಬಲಸಾಧ್ಯ. ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರ ಈ ಸಾಲಿನ ಕನ್ನಡ ರಾಜ್ಯೋತ್ಸವದ ವೇಳೆ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂದು ಕೋರುತ್ತೇನೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಮ್ನಲ್ಲಿ ಕಸರತ್ತು ನಡೆಸುತ್ತಿದ್ದಂತ ಸಂದರ್ಭದಲ್ಲಿ, ಅ.29ರ ಶುಕ್ರವಾರ ಬೆಳಿಗ್ಗೆ ನಟ ಪುನೀತ್ ರಾಜ್ ಕುಮಾರ್ ಅಸ್ವಸ್ಥಗೊಂಡಿದ್ದರು. ತಮ್ಮ ಕುಟುಂಬ ವೈದ್ಯರ ಬಳಿಗೆ ಕರೆದೊಯ್ದು ತೋರಿಸಿದ್ದ ಸಂದರ್ಭ ಅವರಿಗೆ ಹೃದಯಾಘಾತ ಉಂಟಾಗಿತ್ತು. ಬಳಿಕ ವಿಕ್ರಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.