ವಿಜಯಪುರ, ಅ.30 (DaijiworldNews/PY): ಸಿಂದಗಿ ವಿಧಾನಸಭಾ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ಮತಗಟ್ಟೆಯ ಮುಂದೆ ಜನರು ಸಾಲುಗಟ್ಟಿ ನಿಂತು ಮತ ಚಲಾಯಿಸುತ್ತಿರುವುದು ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಇನ್ನು ಮತದಾನಕ್ಕೆ ಸಂಜೆ 7ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮತದಾನ ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,13,561 ಮಹಿಳಾ ಮತದಾರರು, 1,20,844 ಪುರುಷ ಮತದಾರರು, 32 ಇತರೆ ಹಾಗೂ 147 ಸೇವಾ ಮತದಾರರು ಸೇರಿದಂತೆ ಒಟ್ಟು 2,34,584 ಮತದಾರರು ಇದ್ದು, ಇಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
271 ಮತದಾನ ಕೇಂದ್ರ ಹಾಗೂ 26 ಹೆಚ್ಚುವರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅಂಗವಿಕಲರು ಹಾಗೂ ವೃದ್ಧರು ಬಂದು ತಮ್ಮ ಹಕ್ಕು ಚಲಾಯಿಸಲು ಚುನಾವಣಾ ಆಯೋಗದಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ.
ಮತದಾನ ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಸಿಪಿಐ 4, ಎಎಸ್ಐ 70, ಡಿವೈಎಸ್ಪಿ 2, ಡಿಎಆರ್ 40, ಐಆರ್ಬಿ 180, ಪಿಎಸ್ಐ 22, ಸಿಐಎಸ್ಎಫ್ 185, ಹೆಡ್ ಕಾನ್ಸ್ಟೆಬಲ್ ಹಾಗೂ ಪೊಲೀಸ್ ಕಾನ್ ಸ್ಟೆಬಲ್ 477 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.