ಬೆಂಗಳೂರು, ಅ. 29 (DaijiworldNews/SM): ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಕ್ರವಾರ ವಿಧಿವಶರಾಗಿದ್ದಾರೆ. ಅವರ ಸಾವಿಗೂ ಮುನ್ನ ಏನೆಲ್ಲ ಘಟನೆ ನಡೆದಿದೆ ಎನ್ನುವ ವಿಚಾರವನ್ನು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ವಿವರಿಸಿದ್ದಾರೆ.
ಇಂದು ಬೆಳಗ್ಗೆ ಎದ್ದ ಪುನೀತ್ ರಾಜ್ ಕುಮಾರ್ ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ತೆರಳಿದ್ದರು. ಅಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಬಳಿಕ ಪಕ್ಕದಲ್ಲೇ ಇದ್ದ ಕುಟುಂಬ ವೈದ್ಯರಾದ ಡಾ.ರಮಣ ಅವರ ಬಳಿಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿದ್ದರು. ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು.
ತಕ್ಷಣ ಪುನಿತ್ ರಾಜ್ ಅವರನ್ನು ವಿಕ್ರಂ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ದಾರಿ ಮಧ್ಯೆ ಮತ್ತೆ ಹೃದಯಾಘಾತವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ, ಅವರ ಹೃದಯ ಚಟುವಟಿಕೆ ನಿಂತು ಹೋಗಿತ್ತು. ಬಳಿಕ 3 ಗಂಟೆಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಹೃದಯ ಮಸಾಜ್ ಮಾಡಲು ಆಸ್ಪತ್ರೆ ವೈದ್ಯರು ಪ್ರಯತ್ನಿಸಿದ್ದರು. ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಈ ಕಾರ್ಯ ಮಾಡಲಾಗಿತ್ತು. ಆದರೆ, ಅವರ ಹೃದಯ ತುಂಬಾನೇ ಕ್ಷೇಣಿಸಿತ್ತು.
ಅಪ್ಪು ಅವರಿಗೆ ದೊಡ್ಡ ಪ್ರಮಾಣದ ಹೃದಯಾಘಾತವಾಗಿದ್ದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ಇದರಿಂದಾಗಿ ಹೃದಯ ಶಸ್ತ್ರಚಿಕಿತ್ಸೆಗೆ ನಮಗೆ ವೈದ್ಯಕೀಯ ವಿಧಿವಿಧಾನಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ತಿಳಿಸಿದ್ದಾರೆ. ಅಲ್ಲದೆ, ಈ ಹಿಂದೆ ಹೃದಯ ಸಮಸ್ಯೆ ಎಂದು ಅಪ್ಪು ಅವರು ಆಸ್ಪತೆಗೆ ಬಂದ ಉದಾಹರಣೆಗಳಿಲ್ಲ ಎಂದು ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ.