ಬೆಂಗಳೂರು, ಅ.29 (DaijiworldNews/PY): ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಅ.30ರ ಶನಿವಾರ ಸಂಜೆಯೊಳಗೆ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಪುನೀತ್ ಅವರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಸದಾಶಿವನಗರದ ಅವರ ನಿವಾಸಕ್ಕೆ ಕರೆತರಲಾಗಿದೆ. ಇಂದು ಸಂಜೆ 5 ಗಂಟೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಪುನೀತ್ ಅವರ ಅಂತ್ಯಕ್ರಿಯೆಯು ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯ ಬಳಿಯ ಪುನೀತ್ ಫಾರ್ಮ್ ಹೌಸ್ನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಪುನೀತ್ ಫಾರ್ಮ್ಹೌಸ್ಗೆ ಸರ್ಕಾರ ಉನ್ನತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ದೊಡ್ಮನೆ ಕುಟುಂಬ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎನ್ನುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
ಇನ್ನು ಪುನೀತ್ ನಿಧನದ ಹಿನ್ನೆಲೆ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಾರ್ ಆಂಡ್ ರೆಸ್ಟೋರೆಂಟ್ ಸೇರಿದಂತೆ ಮದ್ಯದಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, "ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆ ಶಾಂತಿ, ಸುವ್ಯಸ್ಥೆ ಕಾಪಾಡುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲಾಗುತ್ತದೆ" ಎಂದು ತಿಳಿಸಿದ್ದಾರೆ.