ಬೆಂಗಳೂರು, ಅ.29 (DaijiworldNews/PY): "ನಟ ಪುನೀತ್ ರಾಜ್ ಕುಮಾರ್ ಅವರು ನಿನ್ನೆಯಷ್ಟೇ ನನಗೆ ಕರೆ ಮಾಡಿದ್ದರು. ಇಂದು ನನ್ನ ಭೇಟಿಗೆ ಸಮಯವೂ ನಿಗದಿಯಾಗಿತ್ತು, ಆದರೆ, ವಿಧಿ ಅವರನ್ನು ಬೇರೆಡೆಗೆ ಕರೆದುಕೊಂಡು ಹೋಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
"ರಾಜ್ಯಕ್ಕೆ ಇಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಅವರ ಸಾವಿಗೆ ಇಡೀ ಕರ್ನಾಟಕ ಸ್ತಬ್ಧವಾಗಿದೆ" ಎಂದಿದ್ದಾರೆ.
"ಪುನೀತ್ ರಾಜ್ ಕುಮಾರ್ ಅವರು ನಿನ್ನೆಯಷ್ಟೇ ನನಗೆ ಕರೆ ಮಾಡಿ ಮಾತನಾಡಿದ್ದರು. ಕನ್ನಡ ರಾಜ್ಯೋತ್ಸವದ ದಿನ ನಾವೊಂದು ವೆಬ್ಸೈಟ್ ಲಾಂಚ್ ಮಾಡುತ್ತಿದ್ದೇವೆ. ನೀವೇ ಲೋಕಾರ್ಪಣೆ ಮಾಡಬೇಕು ಎಂದು ಹೇಳಿದ್ದರು. ಇಂದು ನನ್ನ ಭೇಟಿಗೆ ಸಮಯ ಕೂಡಾ ನಿಗದಿಯಾಗಿತ್ತು. ಆದರೆ, ವಿಧಿ ಅವರನ್ನು ಬೇರೆಡೆಗೆ ಕರೆದುಕೊಂಡು ಹೋಗಿದೆ. ಅವರು ವಿಧಿವಶರಾಗಿದ್ದಾರೆ. ಸಕಲ ಸರ್ಕಾರದ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ. ಈ ಮೇರು ನಟನನ್ನು ಶಾಂತ ರೀತಿಯಿಂದ ಕಳುಹಿಸಿಕೊಡಿ. ಅದು ನಮ್ಮ ಸಂಸ್ಕೃತಿ" ಎಂದು ಹೇಳಿದ್ದಾರೆ.
"ಕನ್ನಡದ ಖ್ಯಾತನಟ ಶ್ರೀ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟ ವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.