ಬೆಂಗಳೂರು, ಅ.29 (DaijiworldNews/PY): ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ವಿಕ್ರಮ್ ಆಸ್ಪತ್ರೆಯಿಂದ ಸದಾಶಿವನಗರದ ನಿವಾಸಕ್ಕೆ ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
"ಕನ್ನಡ ಚಿತ್ರ ರಂಗದ ಖ್ಯಾತ ಚಿತ್ರನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತ ವಾಗಿದೆ. ಅವರ ನಟಿಸ್ಸಿದ್ದ ಪೃತ್ವಿ ಮತ್ತು ರಾಜಕುಮಾರ ಚಿತ್ರವನ್ನು ಅಪ್ಪು ಅವರ ಜೊತೆಯಲ್ಲೇ ನೋಡಿದ್ದೇ ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯವಾಗಿದೆ. ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ತುಂಬಲಿ" ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ.
"ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ರಾಜ್ ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
"ಕನ್ನಡದ ಶ್ರೇಷ್ಠ ನಟ ಶ್ರೀ ಪುನೀತ್ ರಾಜಕುಮಾರ್ ಇನ್ನಿಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಾಲನಟನಾಗಿ ಮನಸೂರೆಗೊಂಡು ನಂತರದ ದಿನಗಳಲ್ಲಿ ನಾಯಕನಟನಾಗಿ ಮನೆಮಾತಾಗಿದ್ದ ಅವರು ಉತ್ತಮ ಗಾಯಕರೂ ಆಗಿದ್ದರು. ಅವರ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಸಾಂತ್ವನ ಕೋರುತ್ತೇನೆ. ಪವರ್ ಸ್ಟಾರ್ ಚಿತ್ರಪ್ರೇಮಿಗಳ ಹೃದಯದಲ್ಲಿ ಅಜರಾಮರ"ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
"ಕನ್ನಡ ಚಿತ್ರರಂಗದ ಖ್ಯಾತ ನಟ, ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ. ಅವರ ಕುಟುಂಬಕ್ಕೆ, ಆಪ್ತರಿಗೆ, ಪ್ರತಿ ಕನ್ನಡಿಗರಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ, "ಪವರ್ ಸ್ಟಾರ್" ಎಂದೇ ಖ್ಯಾತರಾಗಿದ್ದ, ಜನಾನುರಾಗಿ ಹಾಗೂ ಶ್ರೇಷ್ಠ ನಟ ಪುನೀತ್ ರಾಜಕುಮಾರ್, ಅವರ ಹಠಾತ್ ನಿಧನ, ಅಪಾರವಾದ ನೋವು ಹಾಗೂ ದುಃಖ ತಂದಿದೆ. ಬರ ಸಿಡಿಲಿನಂತೆ ಬಂದೆರಗಿದ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದ ಸುದ್ದಿಯಿಂದ ಇಡೀ ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗ ಹಾಗೂ ನಾಡಿನ ಜನತೆ, ಆಘಾತಗೊಂಡಿದ್ದು ನಾಡಿನಾದ್ಯಂತ, ದುಃಖದ ಛಾಯೆ ಆವರಿಸಿದೆ. ಕನ್ನಡ ಚಿತ್ರ ಜಗತ್ತಿನ, ಮೇರು ನಟರಾಗಿದ್ದ, ಡಾ: ರಾಜಕುಮಾರ್ ಅವರ ಪುತ್ರರೂ ಆಗಿದ್ದ, ಪುನೀತ್ ರಾಜಕುಮಾರ್, ತಮ್ಮ ಸಹಜ ಅಭಿನಯ ಚಾತುರ್ಯದಿಂದ, ಸದಭಿರುಚಿಯ ಹಾಗೂ ವೈಚಾರಿಕ ನೆಲೆಯುಳ್ಳ ಮಾದರಿ ಪಾತ್ರಗಳಲ್ಲಿ ಅಭಿನಯಿಸಿ, ನಾಡಿನ ಮೂಲೆ ಮೂಲೆಯಲ್ಲಿಹಾಗೂ ನಾಡಿನ ಹೊರಗೂ, ಅಭಿಮಾನಿಗಳ ಸಾಗರವನ್ನೇ ಹೊಂದಿದ್ದರು. ಪುನೀತ್ ರಾಜಕುಮಾರ್ ಅಕಾಲಿಕ ನಿಧನದಿಂದ ನಾನು ದಿಘ್ಮೂಢನಾಗಿದ್ದು, ಮೃತರ ಕುಟುಂಬದ ಸದಸ್ಯರಿಗೆ, ಹಾಗೂ ಅವರ ಅಪಾರ ಪ್ರಮಾಣದ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ, ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
"ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿದ್ದರೂ ಪುನೀತ್ ರಾಜ್ಕುಮಾರ್ ಹಮ್ಮು ಬಿಮ್ಮುಗಳಿಲ್ಲದ ಸಜ್ಜನ ವ್ಯಕ್ತಿ. ತಮ್ಮ ತಂದೆ ಡಾ!ರಾಜ್ರವರಂತೆ ಸರಳತೆಯ ಸಾಕಾರ ರೂಪವಾಗಿದ್ದರು. ಪುನೀತ್ ರಾಜ್ಕುಮಾರ್ ಅಸ್ತಂಗತರಾಗಿದ್ದು ಕನ್ನಡ ಚಿತ್ರರಂಗದ ಅಪರೂಪದ ಮಾಣಿಕ್ಯವೊಂದು ಮರೆಯಾದಂತಾಗಿದೆ" ಎಂದು ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
"ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕನ್ನಡ ಚಲನಚಿತ್ರರಂಗ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಚಿವ ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.
ಜಿಮ್ ಕಸರತ್ತು ನಡೆಸುತ್ತಿದ್ದಂತ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂತಹ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.