ಬೆಂಗಳೂರು, ಅ.29 (DaijiworldNews/HR): ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ಸೀಜ್ ಮಾಡಲಾಗಿದ್ದು, ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಶ್ರೀಕೃಷ್ಣ ಎಂಬಾತನ ಬಂಧನವಾಗಿದೆ. ಡ್ರಗ್ ಜತೆಗೆ ಆತ ಹ್ಯಾಕಿಂಗ್ ಕೂಡ ಮಾಡುತ್ತಿದ್ದ. ನಂತರ 2020 ರಲ್ಲಿ ನಮ್ಮ ಸರ್ಕಾರ ಆತನನ್ನು ಬಂಧನ ಮಾಡಿದೆ. ನಂತರ ವಿಚಾರಣೆ ವೇಳೆ ಶ್ರೀಕಿ ಹ್ಯಾಕರ್ ಎಂದು ಗೊತ್ತಾಗುತ್ತದೆ. ಡಾರ್ಕ್ ವೆಬ್ ಸೇರಿ ಬೇರೆ ಹಣಕಾಸು ಸಂಸ್ಥೆಗಳ ವೆಬ್ ಸೈಟ್ ಹ್ಯಾಕ್ ಮಾಡಿದ್ದು ಗೊತ್ತಾಗುತ್ತದೆ. ಮೂರು ಕೇಸ್ ಆತನ ಮೇಲಿದೆ. ಮನಿ ಲಾಂಡರಿಂಗ್, ಹ್ಯಾಕಿಂಗ್, ಡ್ರಗ್ ಕೇಸ್ ನಲ್ಲಿ ಆತ ಶಾಮೀಲಾಗಿದ್ದಾನೆ" ಎಂದರು.
ಇನ್ನು 2018 ರಲ್ಲಿ ಶ್ರೀಕಿ ಮೇಲೆ ಕೇಸ್ ಬಂದಿದ್ದು, ಆತನ ಜತೆ ಇದ್ದ ಐದಾರು ಜನರ ಬಂಧನವಾಗುತ್ತದೆ. ಆದರೆ ಶ್ರೀಕಿ ಬಂಧನ ಮಾಡಿರಲ್ಲ. ಆಗ ಯಾವ ಸರ್ಕಾರ ಇತ್ತು ಗಮನಿಸಿ. ನಂತರ ಆತನಿಗೆ ಬೇಲ್ ಸಿಗುತ್ತದೆ. ಬೇಲ್ ಸಿಕ್ಕ ಬಳಿಕವೂ ಕರೆಸಿ ವಿಚಾರಣೆ ಮಾಡಲ್ಲ. ಯುಬಿ ಸಿಟಿ ದಾಂಧಲೆ ಪ್ರಕರಣದಲ್ಲಿ ಆತನ ಬಂಧನ ಆಗಿರುತ್ತದೆ. ಆಗಲೇ ಸರಿಯಾಗಿ ವಿಚಾರಣೆ ಮಾಡಿದ್ದಿದ್ದರೆ ಆತನ ಇತರೆ ದುಷ್ಕೃತ್ಯ, ಡ್ರಗ್ ವಿಚಾರ ಬಯಲಿಗೆ ಬರುತ್ತಿತ್ತು" ಎಂದಿದ್ದಾರೆ.
ನಾವು ಅತ್ಯಂತ ಪ್ರಾಮಾಣಿಕತೆಯಿಂದ ತನಿಖೆ ಮಾಡಿದ್ದೇವೆ. ಈ ಕೇಸ್ ನಲ್ಲಿ ಕಾಂಪ್ರಮೈಸ್ ಇಲ್ಲ, ನಾವು ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಟ್ ಕಾಯಿನ್, ಮನಿಲಾಂಡರಿಂಗ್, ಡ್ರಗ್ ಕೇಸ್ ನಲ್ಲಿ ಯಾರೇ ಇದ್ದರೂ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ರಕ್ಷಣೆ ಮಾಡ್ತಿಲ್ಲ. ಯಾರೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳುತ್ತೇವ ಎಂದು ಸಿಎಂ ಭರವಸೆ ನೀಡಿದರು.