ಮುಂಬೈ, ಅ 29 (DaijiworldNews/MS): ಮೊಬೈಲ್ ಕರೆ ಮಾಡುವವರ ಗುರುತನ್ನು ಪತ್ತೆ ಹಚ್ಚುವ ಅಪ್ಲಿಕೇಶನ್ ಟ್ರೂಕಾಲರ್ ಗುರುವಾರ ಭಾರತೀಯ ರೈಲ್ವೆಯೊಂದಿಗೆ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದೆ.
ಐ ಆರ್ ಸಿ ಟಿ ಸಿ ಜಾಲತಾಣದಿಂದ ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ. ಇದರಿಂದಾಗಿ ವಂಚನೆಗಳನ್ನು ತಡೆಗಟ್ಟಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಪರಿಶೀಲಿಸಿದ ಟಿಕ್ ಮಾರ್ಕ್ ಐಕಾನ್ ಟ್ರೂಕಾಲರ್ನಲ್ಲಿ ಭಾರತೀಯ ರೈಲ್ವೆಯ ಬ್ರಾಂಡ್ ಹೆಸರು ಮತ್ತು ಪ್ರೊಫೈಲ್ ಫೋಟೋವನ್ನು ಲಾಕ್ ಮಾಡುತ್ತದೆ, ಸುರಕ್ಷಿತ ಗ್ರಾಹಕ ಅನುಭವವನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ.
ಅಲ್ಲದೆ ರೈಲ್ವೇ ಸಹಾಯವಾಣಿ 139 ಜೊತೆ ವ್ಯವಹರಿಸುವಾಗ ಭಾರತೀಯ ರೈಲ್ವೇ ಅಧಿಕೃತ ಲೋಗೋ ವನ್ನು ತೋರ್ಪಡಿಸಲಿದೆ. 2007ರಲ್ಲೇ ಭಾರತೀಯ ರೈಲ್ವೇ 139 ಸಹಾಯವಾಣಿಯನ್ನು ಭಾರತ್ ಬಿಪಿಒ ಸಹಯೋಗದಲ್ಲಿ ಪ್ರಾರಂಭಿಸಿತ್ತು. ದಿನಂಪ್ರತಿ ಸುಮಾರು 2 ಲಕ್ಷ ರೈಲ್ವೇ ಗ್ರಾಹಕರು ಈ ಸೇವೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಈ ಹೊಸ ಓಪ್ಪಂದದ ಭಾಗವಾಗಿ ಟ್ರೂ ಕಾಲರ್ ಜೊತೆಗೆ ಕೆಲಸ ಮಾಡಲು ನಾವು ಸಂತೋಷಪಡುತ್ತೇವೆ. ಟ್ರೂಕಾಲರ್ನೊಂದಿಗಿನ ತಾಂತ್ರಿಕ ಸಹಯೋಗದೊಂದಿಗೆ ಗ್ರಾಹಕರೊಂದಿಗೆ ಐ ಆರ್ ಸಿ ಟಿ ಸಿ ಯ ಸಂವಹನ ಚಾನೆಲ್ಗಳನ್ನು ಹೆಚ್ಚು ದೃಢವಾದ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿಸುವಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಎಂದು ಐ ಆರ್ ಸಿ ಟಿ ಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಜನಿ ಹಸಿಜಾ ಹೇಳಿದ್ದಾರೆ.